ಯಾವುದೇ ದೂರದೃಷ್ಟಿ ಇಲ್ಲದ ಭರವಸೆಗಳ ಕಣ್ಣುಕಟ್ಟಿನ ಬಜೆಟ್ : ಸಿದ್ದರಾಮಯ್ಯ

ಇದೊಂದು ರೈತರ ಪಾಲಿನ ಅತ್ಯಂತ ನಿರಾಶದಾಯಕ ಬಜೆಟ್ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Last Updated : Feb 2, 2018, 01:56 PM IST
ಯಾವುದೇ ದೂರದೃಷ್ಟಿ ಇಲ್ಲದ ಭರವಸೆಗಳ ಕಣ್ಣುಕಟ್ಟಿನ ಬಜೆಟ್ : ಸಿದ್ದರಾಮಯ್ಯ title=

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ  ಪೂರ್ಣಾವಧಿ ಅಂತಿಮ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ ಭರವಸೆಗಳ ಕಣ್ಣುಕಟ್ಟಿನ ಮುಂಗಡ ಪತ್ರ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು ರಾಜ್ಯ ವಿಧಾನಸಭೆಗಳ ಮತ್ತು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕರ್ಷಕ ಯೋಜನೆಗಳನ್ನು ಘೋಷಿಸಿದ್ದರೂ, ಆ ಯೋಜನೆಗಳಿಗೆ ಅವಶ್ಯಕ ಹಣವನ್ನು‌ ನಿಗದಿಗೊಳಿಸದೆ ದೇಶದ ಜನರನ್ನು ಮರುಳು ಮಾಡುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ. 

ಕಳೆದ ವರ್ಷದ ಕೇಂದ್ರ ಬಜೆಟ್ ನಲ್ಲಿ‌ ಘೋಷಿಸಿ ಜಾರಿಗೊಳಿಸಲಾಗದ 'ರಾಷ್ಟ್ರೀಯ ಆರೋಗ್ಯ ರಕ್ಷಣಾ ಕಾರ್ಯಕ್ರಮ'ವನ್ನು ಈ ಬಾರಿ ಮತ್ತೆ ಘೋಷಿಸಲಾಗಿದೆ. ಕಳೆದ ಬಾರಿ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿಯ ವಿಮೆ ಮಾಡುವ ಭರವಸೆ ನೀಡಲಾಗಿತ್ತು. ಈ ಬಾರಿ‌ ಅದನ್ನು ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದಷ್ಟೇ ಕೇಂದ್ರ ಬಜೆಟ್ 2018ರ ಸಾಧನೆ ಎಂದು ಸಿದ್ಧರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

ಮೂರು ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ ಮೆಡಿಕಲ್ ಕಾಲೇಜು ತೆರೆಯುವುದಾಗಿ ಕೇಂದ್ರ ಬಜೆಟ್ನಲ್ಲಿ ಹೇಳಿದ್ದಾರೆ. ಆದರೆ, ನಾವು ಜಿಲ್ಲೆಗೊಂದರಂತೆ ಕಾಲೇಜು ಮಾಡಲು ಮುಂದಾಗಿದ್ದೇವೆ. ಈಗಾಗಲೇ 16 ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಐದು ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಕಾಲೇಜು ತೆರೆಯಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

2022ರ ವೇಳೆಗೆ ಎಲ್ಲರಿಗೂ ವಸತಿ‌ ಕಲ್ಪಿಸಲಾಗುವುದು ಎಂದು ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದಕ್ಕೆ ಅವಶ್ಯಕ ಹಣ ನಿಗದಿಯ ಪ್ರಸ್ತಾಪವೇ ಬಜೆಟ್ ನಲ್ಲಿ ಇಲ್ಲ. ಹಾಗೆಯೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾದ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದಾವುದೂ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಹಾಗಾಗಿ ಇದೊಂದು ರೈತರ ಪಾಲಿನ ಅತ್ಯಂತ ನಿರಾಶದಾಯಕ ಬಜೆಟ್ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಿತ್ತೀಯ ಕೊರತೆ ಕಳೆದ ಬಾರಿಯ ಬಜೆಟ್ ನಲ್ಲಿ 3.2ಕ್ಕೆ ತರಲಾಗುವುದು ಎಂದು ಘೋಷಿಸಲಾಗಿತ್ತು. ಅದು ಈ ಬಾರಿಯೂ 3.5 ರಲ್ಲಿಯೇ ಮುಂದುವರೆದಿದೆ. ಮತ್ತೆ ಈ ಬಾರಿ ಅದನ್ನು 3.3ಕ್ಕೆ ಇಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದು ಸಾಧ್ಯವೇ? ಎಂದು ಸಿದ್ದು ಪ್ರಶ್ನಿಸಿದ್ದಾರೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಿಂದೆ ಒಂದು ಬ್ಯಾರಲ್ ಕಚ್ಚಾ ತೈಲಕ್ಕೆ 110 ಡಾಲರ್ ಇದ್ದಾಗ ಹಾಗೂ ಈಗ ಬ್ಯಾರಲ್ ಒಂದಕ್ಕೆ 43 ಡಾಲರ್ ಇರುವಾಗ ಪೆಟ್ರೋಲ್ ಬೆಲೆ ಹೆಚ್ಚು ಕಡಿಮೆ ಒಂದೇ ಆಗಿದೆ. ೩ ತಿಂಗಳಲ್ಲಿ ದರ ರೂ.10 ಹೆಚ್ಚಾಗಿದೆ. ಇದು ಜನತೆಗೆ ಬಗೆದಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಕೇಂದ್ರ ಬಜೆಟ್ ಗೊತ್ತುಗುರಿಯಿಲ್ಲದ ಬಜೆಟ್ ಎಂದು ಟೀಕಿಸಿದ್ದಾರೆ. 

Trending News