ಗದಗ: ಈಗೇನಿದ್ದರೂ ವೈರಲ್ ಜಮಾನ, ಕಣ್ಣ ಸನ್ನೆ ಮಾಡುವುದರಿಂದ ಹಿಡಿದು ಮದುವೆ ವೇದಿಕೆ ಮೇಲೆ ಡ್ಯಾನ್ಸ್ ಮಾಡುವುದು ಕೂಡ ಈಗ ಜಗತ್ಪ್ರಸಿದ್ದಿಗೊಳಿಸುತ್ತದೆ ಎನ್ನುವುದನ್ನು ಈ ಹಿಂದೆ ಯಾರು ಊಹಿಸಿರಲಿಲ್ಲ. ಆದರೆ ಈಗ ಅದು ದಿಟವಾಗುತ್ತಿದೆ, ಇದಕ್ಕೆ ಕಾರಣ ಈಗಿರುವ ಸೋಶಿಯಲ್ ಮೀಡಿಯಾ. ಅದು ಯಾವುದೂ ಮೂಲೆಯಲ್ಲಿರುವ ಪ್ರತಿಭೆಯನ್ನು ಸಹಿತ ಮುನ್ನಲೆಗೆ ತಂದು ಖ್ಯಾತಿಗೊಳಿಸಿ ಬಿಡುತ್ತದೆ. ಅಂತಹ ತಾಕತ್ ಈಗಿನ ಸೋಶಿಯಲ್ ಮೀಡಿಯಾಗೆ ಇದೆ.
ಈ ಕಾರಣದಿಂದಲೇ ಈಗ ಗದಗ ಜಿಲ್ಲೆಯ ಶಿರಹಟ್ಟಿಯವರಾದ ಹನುಮಂತ ಬಟ್ಟೂರು ಎನ್ನುವ ಕುರಿ ಮೇಯಿಸುವ ಹುಡುಗನೋಬ್ಬ ಈಗ ಕರ್ನಾಟಕದಾದ್ಯಂತ ಪ್ರಸಿದ್ದಿಯಾಗಿದ್ದಾನೆ. ಹಣಮಂತನು ತಾನು ಕುರಿ ಮೇಯಿಸುತ್ತಿದ್ದ ವೇಳೆಯಲ್ಲಿ ತಾನು ಹಾಡುತ್ತಿರುವುದನ್ನು ಸ್ವತಃ ರೆಕಾರ್ಡ್ ಮಾಡಿದ್ದಾನೆ, ಈ ವೀಡಿಯೋವನ್ನು ಹಣಮಂತ ಹಾಲಿಗೇರಿ ಎನ್ನುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಾದ ನಂತರ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ಗಲಾಟೆ ಅಳಿಯಂದ್ರು ಚಿತ್ರದಲ್ಲಿನ "ಸಾಗರಿಯೇ ಸಾಗರಿಯೇ" ಎನ್ನುವ ಹಾಡಿಗೆ ಹಾಡಿದ್ದಾನೆ.
ಮೂಲತ ಡಾ.ರಾಜ್ ಕುಮಾರ್ ಅಭಿಮಾನಿಯಾಗಿರುವ ಹಣಮಂತು ಓದಿದ್ದು ಮಾತ್ರ ಹೈಸ್ಕೂಲ್ ವರೆಗೆ ಅಷ್ಟೇ, ವಿದ್ಯಾಬ್ಯಾಸದ ನಂತರ ಕುಲಗಸುಬು ಮಾಡುತ್ತಿದ್ದಾನೆ. ನಿಜ ಹೇಳಬೇಕೆಂದರೆ ಪ್ರತಿಭೆ ಅನ್ನೋದು ಕೇವಲ ಅಕ್ಷರ ಕಲಿತವರ ಸ್ವತ್ತಲ್ಲ ಎನ್ನುವುದಕ್ಕೆ ಈಗ ಹನುಮಂತವರ ಪ್ರತಿಭೆಯೇ ಸಾಕ್ಷಿ ಎನ್ನುವಂತಾಗಿದೆ.