ಇದು ರಾಜ್ಯ ಬಜೆಟ್ ಅಲ್ಲ; ಅಣ್ಣ-ತಮ್ಮಂದಿರ ಬಜೆಟ್- ಯಡಿಯೂರಪ್ಪ ಟೀಕೆ

ಇಂದು ಮಂಡಿಸಿದ ಸಮ್ಮಿಶ್ರ ಸರ್ಕಾರದ ಬಜೆಟ್ ನಾಡಿನ ಬಜೆಟ್ ಅಲ್ಲ, ಅಣ್ಣ-ತಮ್ಮಂದಿರ ಬಜೆಟ್ ಎಂದು ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

Last Updated : Jul 5, 2018, 03:45 PM IST
ಇದು ರಾಜ್ಯ ಬಜೆಟ್ ಅಲ್ಲ; ಅಣ್ಣ-ತಮ್ಮಂದಿರ ಬಜೆಟ್- ಯಡಿಯೂರಪ್ಪ ಟೀಕೆ title=

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಸಮ್ಮಿಶ್ರ ಸರ್ಕಾರದ ಬಜೆಟ್ ನಾಡಿನ ಬಜೆಟ್ ಅಲ್ಲ, ಅಣ್ಣ-ತಮ್ಮಂದಿರ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

ಬಜೆಟ್ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಆಡಿದ ಮಾತಿಗೆ ತಪ್ಪಿ, ರೈತರಿಗೆ ದ್ರೋಹ ಮಾಡಿದ್ದಾರೆ. ಅವರು ಮತ್ತು ಅವರ ತಮ್ಮ ಹೆಚ್.ಡಿ.ರೇವಣ್ಣ ಪ್ರತಿನಿಧಿಸುವ ರಾಮನಗರ ಮತ್ತು ಹಾಸನ ಜಿಲ್ಲೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ಬಜೆಟ್. ಹೀಗೆ ಅಣ್ಣ-ತಮ್ಮಂದಿರ ಬಜೆಟ್ ಮಾಡಲು ನಿಮ್ಮನ್ನು ಜನ ಸಿಎಂ ಮಾಡಿದ್ರಾ? ಎಂದು ಯಡಿಯೂರಪ್ಪ ಹರಿಹಾಯ್ದರು.

ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ ಕುಮಾರಸ್ವಾಮಿ

ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕೇವಲ 34 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲಮನ್ನಾಗೆ ಎಲ್ಲಿಂದ ಹಣ ಹೂಡಿಸುತ್ತೇವೆಂದು ಹೇಳಿಲ್ಲ. ಅಲ್ಲದೆ, ಸಾಲ ಮನ್ನಾದ ಹೆಸರಿನಲ್ಲಿ ಪೆಟ್ರೋಲ್ ದರ, ತೆರಿಗೆ ಏರಿಕೆ ಮಾಡಿ ಜನಸಾಮಾನ್ಯರಿಗೂ ಹೊರೆ ಹೊರಿಸಿದ್ದಾರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡನ್ನು ಸಂಪೂರ್ಣ ಕಡೆಗಣಿಸಿದ್ದು, ತಾವು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ ಎಂಬುದನ್ನು ಅವರು ಮರೆತಿದ್ದಾರೆ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ. ಯಿಂದ 5 ಕೆ.ಜಿಗೆ ಇಳಿಸಿದ್ದೀರಿ. ಗರ್ಭಿಣಿಯರಿಗೆ 6 ಸಾವಿರ ಕೊಡುತ್ತೇವೆಂದು ಹೇಳಿ ಒಂದು ಸಾವಿರಕ್ಕೆ ಇಳಿಸಿದ್ದೀರಿ. ನೇಕಾರರ ಸಾಲಮನ್ನಾ ಮಾಡ್ತೇವೆ, ಮಹಿಳೆಯ ಸ್ವಸಹಾಯ ಸಂಘದ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದಿರಿ, ಆದರೆ ಈಗ ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದ ಯಡಿಯೂರಪ್ಪ ಈ ಬಜೆಟ್​ ಓದಿ ಯಾರು ಮೋಸ ಹೋಗಬೇಡಿ. ಜನಸಾಮಾನ್ಯರಿಗೆ ದ್ರೋಹ ಬಗೆದಿರುವ ಈ ಬಜೆಟ್ ವಿರೋಧಿಸಿ ಜುಲೈ 12ರ ಬಳಿಕ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

Trending News