ಬೆಂಗಳೂರು: ಸಾಹಿತಿಗಳನ್ನೂ ಹತ್ಯೆ ಮಾಡಲು ಸಂಚು ರೂಪಿಸುತ್ತಾರೆ ಎಂದರೆ ನಮ್ಮ ದೇಶ ಎಂತಹ ಸ್ಥಿತಿಯಲ್ಲಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಯಾರು ಮಾಡಿದವರು ಎಂಬುದು ಮುಖ್ಯ. ಆದರೆ ಅವರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು ಎಂಬುದಲ್ಲ. ಗೌರಿ ಲಂಕೇಶ್ ಹಿಟ್ ಲಿಸ್ಟ್'ನಲ್ಲಿ ನನ್ನ ಹೆಸರು ಇತ್ತು ಎಂಬ ಕಾರಣಕ್ಕೆ ಸರ್ಕಾರ ರಕ್ಷಣೆ ನೀಡಿದೆ. ನಾನು ಕೋಮುವಾದವನ್ನು ವಿರೋಧಿಸುತ್ತೇನೆ. ಆದರೆ ಯಾರ ವಿರೋಧಿಯೂ ಅಲ್ಲ, ಜಾತಿ ಧರ್ಮ ನೋಡಿಲ್ಲ ಎಂದು ಹೇಳಿದರು.
ಉಪಮುಖ್ಯಮಂತ್ರಿ ಅವರ ಭೇಟಿ ಕುರಿತ ಪ್ರತಿಕ್ರಿಯಿಸಿದ ಅವರು, ಗೌರಿ ಲಂಕೇಶ್ ಅವರ ಹತ್ಯೆ ಬಗ್ಗೆ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಅದಕ್ಕೆ ಅಭಿನಂದನೆ ಸಲ್ಲಿಸಿದೆ. ಆದರೆ ಕಲ್ಬುರ್ಗಿ ಅವರ ಹತ್ಯೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಬಗ್ಗೆಯೂ ಸ್ವಲ್ಪ ಗಮನಹರಿಸಬೇಕೆಂದು ಪರಮೇಶ್ವರ್ ಅವರನ್ನು ಕೇಳಿಕೊಂಡಿದ್ದೇನೆ. ಇದೊಂದು ಸೌಹಾರ್ಧಯುತ ಭೇಟಿ ಅಷ್ಟೇ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.