ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್ ವಿದ್ಯಾರ್ಥಿಗಳ ಯಾವುದೇ ದೂರುಗಳಿದ್ದರೂ ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ತೆರೆದಿರುವ ಸಹಾಯವಾಣಿಗೆ ನೀಡುವ ಮೂಲಕ ಶೀಘ್ರವೇ ಸಮಸ್ಯೆ ಬಗೆಹರಿಸಿಕೊಳ್ಳಲು ವೇದಿಕೆ ಮಾಡಿಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ನೃಪತುಂಗಾ ರಸ್ತೆಯಲ್ಲಿರುವ ಯವನಿಕಾದಲ್ಲಿ ಸಮಾಜ ಕಲ್ಯಾಣ ಇಲಾಖೆ ತೆರೆದಿರುವ ನೂತನ 'ಕಲ್ಯಾಣ ಕೇಂದ್ರ' ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಒಟ್ಟು 2.5 ಸಾವಿರ ಹಾಸ್ಟೆಲ್‌ಗಳು ನಡೆಸುತ್ತಿವೆ. ಹಾಸ್ಟೆಲ್‌ನಲ್ಲಿರುವ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಾಸ್ಟೆಲ್‌ಗಳಲ್ಲಿ ಊಟದ ವ್ಯವಸ್ಥೆ, ಹಾಸಿಗೆ ದಿಂಬು, ವಸತಿ ಇತರೆ ಮೂಲಸೌಕರ್ಯದ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ- 080- 22634300, ವಾಟ್ಸ್‌ಅಪ್ ಸಂಖ್ಯೆ- 9901100000 ಈ ಸಹಾಯವಾಣಿಗೆ ಕರೆ ಅಥವಾ ವಾಟ್ಸ್‌ಅಪ್ ಮಾಡುವ ಮೂಲಕ ಸಮಸ್ಯೆ ಹೇಳಿಕೊಳ್ಳಬಹುದು. ಜೊತೆಗೆ ಸಲಹೆಗಳನ್ನೂ ನೀಡಬಹುದು ಎಂದರು.
The benefits extended by the Government become successful only when its beneficiaries make the best use of them. I am confident Kalyana Kendra, a first of its kind initiative by Social Welfare Department will empower SC/STs to make full use of benefits and schemes focused on them pic.twitter.com/9KGo7OeD4p
— Dr. G Parameshwara (@DrParameshwara) August 7, 2018
ಈ ದೂರಿಗೆ ಮೊದಲಿಗೆ ತಹಶಿಲ್ದಾರರು ಸ್ಪಂದಿಸಲಿದ್ದಾರೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ ಸ್ಪಂದಿಸುವರು. ಒಂದು ವೇಳೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಅಂತಹ ವಿಷಯ ರಾಜ್ಯಮಟ್ಟದವರೆಗೂ ಹೋಗಲಿದೆ. ಇಲ್ಲಿಯೂ ಪರಿಹಾರ ಸಿಗದಿದ್ದರೆ ಸಚಿವರ ಮಟ್ಟಕ್ಕೆ ಹೋಗಲಿದ್ದು, ಒಟ್ಟಾರೆ ಹಾಸ್ಟೆಲ್‌ನಲ್ಲಿರುವ ಎಸ್‌ಸಿ, ಎಸ್‌ಟಿ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಮೊದಲ ಕೇಂದ್ರವಾಗಿದೆ. ಹಿಂದಿನಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ದೂರುಗಳು ಇದ್ದವು. ಸದನದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿವೆ. ಆಯವ್ಯಯದಲ್ಲಿ ಬಿಡುಗಡೆಯಾಗುವ ಅಷ್ಟೂ ಅನುದಾನವೂ ಈ ಮಕ್ಕಳಿಗೆ ತಲುಪಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದೇ ಇಲಾಖೆ ಹಾಗೂ ಸರ್ಕಾರದ ಉದ್ದೇಶ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.