ಬೆಂಗಳೂರು: ಇನ್ಮುಂದೆ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾಯ್ದೆ ಪ್ರಕಾರ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಪಬ್, ಕ್ಲಬ್ಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ. ಈ ಆದೇಶ ಪಾಲಿಸದ ಹೋಟೆಲ್, ಬಾರ್ ಗಳ ಪರವಾನಿಗೆ ಕೂಡ ರದ್ದಾಗಲಿದೆ ಎಂದು ಹೇಳಿದರು.
ನಗರ ಆರೋಗ್ಯ ಯೋಜನೆಗಳು ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತಂತೆ ಅಮೆರಿಕಾ ನಿಯೋಗದೊಂದಿಗೆ ಸಚಿವ ಯು.ಟಿ.ಖಾದರ್ ಸಭೆ ನಡೆಸಿದರು. ತಂಬಾಕು ಆಧಾರಿತ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ನಮಗೆ ಎಲ್ಲ ಇಲಾಖೆಗಳ ಸಹಕಾರ ಬೇಕು. ಅದಕ್ಕಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಪ್ರಮುಖರ ಸಭೆ ಕರೆಯಲಾಗಿದೆ ಎಂದರು. ಇದೇ ವೇಳೆ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ತೆರಿಗೆ ರಿಯಾಯ್ತಿ ರದ್ದು ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.