ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಿದರೆ ಒಬಿಸಿ ಸಮುದಾಯಕ್ಕೆ ಅನ್ಯಾಯ : ಸಿದ್ದರಾಮಯ್ಯ

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಮೀಸಲು ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Written by - RACHAPPA SUTTUR | Last Updated : Mar 31, 2022, 02:29 PM IST
  • ಮೀಸಲು ಸೌಲಭ್ಯ ಕಲ್ಪಿಸದೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ - ಸಿದ್ದರಾಮಯ್ಯ
  • ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಗ್ಗಂಟು - ಸಿದ್ದರಾಮಯ್ಯ
  • "ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವುದಿಲ್ಲ"
ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಿದರೆ ಒಬಿಸಿ ಸಮುದಾಯಕ್ಕೆ ಅನ್ಯಾಯ : ಸಿದ್ದರಾಮಯ್ಯ  title=
"ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವುದಿಲ್ಲ"

ಬೆಂಗಳೂರು : ಮೀಸಲು ಸೌಲಭ್ಯ ಕಲ್ಪಿಸದೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. 

ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿಧಾನ ಮಂಡಲದ ಉಭಯ ಸದನ ನಾಯಕರ ಸಭೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ (Siddaramaiah) ಮಾತನಾಡಿದರು. 

ಇದನ್ನೂ ಓದಿ :  KS Eshwarappa : 'ಗಂಡಸ್ತನವನ್ನು ಒಂದು , ಎರಡು ಅಥವಾ ಮೂರು ಕಡೆ ಬಳಸಬೇಕೋ ಅದು ಕುಮಾರಸ್ವಾಮಿಗೆ ಗೊತ್ತಿದೆ'

ಸುಪ್ರೀಂಕೋರ್ಟ್ (Supreme court) ಆದೇಶದ ಹಿನ್ನೆಲೆಯಲ್ಲಿ ಈಗ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಮೀಸಲು ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಕಾನೂನಾತ್ಮಕವಾಗಿ ಪರಿಶೀಲಿಸಬೇಕು ಎಂದರು. 

ಮೀಸಲು ಸೌಲಭ್ಯ ಒದಗಿಸುವ ಮುನ್ನ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ (Court) ಹೇಳಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈಗಾಗಲೇ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಆ ವರದಿಯನ್ನು ಪರಿಗಣಿಸುವ ಸಾಧ್ಯತೆ ಕುರಿತಾಗಿಯೂ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ  (Siddaramaiah) ಮನವಿ ಮಾಡಿದರು.

ಇದನ್ನೂ ಓದಿ : CM Ibrahim: ಯುಗಾದಿ ಬಳಿಕ ದೊಡ್ಡ ಮಟ್ಟದ ರಾಜಕೀಯ ಪ್ರವಾಹ : ಸಿಎಂ ಇಬ್ರಾಹಿಂ ಭವಿಷ್ಯ 

ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮತ್ತೊಂದು ಆಯೋಗವನ್ನು ರಚನೆ ಮಾಡಿ ಸಮೀಕ್ಷೆ ನಡೆಸುವುದು ಸೂಕ್ತ. ಅಲ್ಲಿಯವರೆಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬಾರದು (Local body election). ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಆಗುತ್ತದೆ. ಆ ವರ್ಗಗಳಿಗೆ ಭಾರೀ ಅನ್ಯಾಯವಾಗುತ್ತದೆ. ಹಿಂದುಳಿದ ವರ್ಗದವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು. 

ಮೀಸಲು ಪ್ರಮಾಣ ಹೆಚ್ಚಿಸಬೇಕೆಂದ ಬೇಡಿಕೆ ಮುಂದಿಟ್ಟುಕೊಂಡು ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಕಳೆದ 50 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆ ಬೇಡಿಕೆ ಈಡೇರಿಸುವ ಕುರಿತಾಗಿಯೂ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News