ಧಾರವಾಡ: ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ, ಸಂಸತ್ತಿನಲ್ಲಿ ಅಧಿವೇಶನ ನಡೆಸಲು ಅವಕಾಶ ನೀಡದೆ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೆ ಸಮತಾ ಸೇನೆ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಷಾ ಅವರು, ಧಾರವಾಡದಲ್ಲಿ ಪ್ರತಿಭಟನೆಗೆ ತೆರಳುವ ಮುನ್ನ ಸುಪ್ರೀಂಕೋರ್ಟ್ ನೀಡಿರುವ ಎಸ್ಟಿ/ಎಸ್ಸಿ ಕಾಯಿದೆ ತೀರ್ಪು ತಿದ್ದುಪಡಿಯ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಸಮತಾ ಸೇನೆ ಕಾರ್ಯಕರ್ತರು ಅಮಿತ್ ಷಾಗೆ ಕಪ್ಪುಪಟ್ಟಿ ಪ್ರದರ್ಶನಕ್ಕೆ ಮುಂದಾದರು. ಆದರೆ, ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದ ಅಮಿತ್ ಷಾ ಅವರ ಕಾರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೂ ಸುಮ್ಮನಿರದ ಕಾರ್ಯಕರ್ತರು 'ಕೋಮುವಾದಿ ಅಮಿತ್ ಷಾ' ಎಂದು ಘೋಷಣೆಗಳನ್ನು ಕೂಗುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.