ಯಾದಗಿರಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ಜಲಧಾರೆ ಯೋಜನೆಯಡಿ 1 ಸಾವಿರ ಕೋಟಿ ರೂ.- ಸಿಎಂ ಭರವಸೆ

ಈ ಹಿಂದೆ 2006 ರಲ್ಲಿ  ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡ್ರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ.

Last Updated : Jun 22, 2019, 07:27 AM IST
ಯಾದಗಿರಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ಜಲಧಾರೆ ಯೋಜನೆಯಡಿ 1 ಸಾವಿರ ಕೋಟಿ ರೂ.- ಸಿಎಂ ಭರವಸೆ title=

ಯಾದಗಿರಿ: ಜಲಧಾರೆ ಯೋಜನೆಯಡಿ ನದಿಯ ಮೂಲದ ನೀರನ್ನು ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಇಂದು ಗುರುಮಠಕಲ್ ಕ್ಷೇತ್ರದ ಚಂಡ್ರಕಿಯಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ, ಗುರುಮಠಕಲ್ ಕ್ಷೇತ್ರದಲ್ಲಿ  3197  ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸುಮಾರು 20 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ 2006 ರಲ್ಲಿ  ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡ್ರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಉತ್ತಮ ಆರೋಗ್ಯ ವ್ಯವಸ್ಥೆ  ಕಲ್ಪಿಸಲು ಜಿಲ್ಲೆಯಲ್ಲಿ  300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಮಂಜೂರಾತಿಗೆ ಇಂದು ಆದೇಶ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕದ ಗುಣಮಟ್ಟ ಸುಧಾರಣೆ, ಆಸ್ಪತ್ರೆ ತಲುಪಲು ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಿಸಲಾಗುವುದು ಎಂದರು. 

ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಮೂಲಕ ಇಂದು ಎಲ್ಲಾ ಸಾರ್ವಜನಿಕರ ಅರ್ಜಿಗಳನ್ನು ಸಮಾಧಾನಕರವಾಗಿ ಪರಿಶೀಲಿಸಲಾಗುವುದು. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಾಧ್ಯವಿರುವ ಕಾರ್ಯಗಳಿಗೆ ಇಲ್ಲಿಯೇ ಆದೇಶ ನೀಡಲಾಗುವುದು. ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಕೋರಿಕೆಯಂತೆ ಶಹಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಶಹಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆ ಯೋಜನೆಗೂ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಸಾಲಮನ್ನಾ ಯೋಜನೆಯಡಿ 302 ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಸುಮಾರು 75 ಸಾವಿರ ರೈತರಿಗೆ ಈಗಾಗಲೇ ಸೌಲಭ್ಯ ದೊರೆತಿದೆ. ಉಳಿದ ರೈತರ ಸಾಲದ ಖಾತೆಗೆ ಜಮೆಯಾಗಬೇಕಿದ್ದ ಹಣವನ್ನು, ಸಹಕಾರ ಬ್ಯಾಂಕುಗಳಿಂದ ಅಪೆಕ್ಸ್ ಬ್ಯಾಂಕಗಳಿಗೆ ಬಾಕಿ ಇರುವ ಹಣದ ಕಾರಣಕ್ಕೆ ಆ ರಂಗದವರು ತಡೆಹಿಡಿದಿದ್ದಾರೆ. ಇದರಿಂದಾಗಿ ಸಾಲಮನ್ನಾ ಲೆಕ್ಕ ಚುಕ್ತಾ ಕಾರ್ಯ ವಿಳಂಬವಾಗಿದೆ. ಇದಕ್ಕೆ ಸರ್ಕಾರ ಕಾರಣವಲ್ಲ. ಹೊಸ ಸಾಲಗಳ ಬಿಡುಗಡೆಗೆ ಸಹಕಾರ ಬ್ಯಾಂಕುಗಳಿಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೈದರಾಬಾದ್ ಕರ್ನಾಟಕದ  ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಗಣಿ, ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ ಮಾತನಾಡಿ, ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು 2006 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಹಲವು ಗ್ರಾಮಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಈಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯದ ಗ್ರಾಮೀಣ ಜನರ ಕಷ್ಟಗಳನ್ನು ನೇರವಾಗಿ ಅರಿಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಚಂಡ್ರಕಿ ಗ್ರಾಮದಿಂದ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ದುರ್ಬಲ ವರ್ಗಗಳ ,ಹಿಂದುಳಿದವರ,ಅಲ್ಪ ಸಂಖ್ಯಾತರ,ವಿಕಲಚೇತನರ ಹಾಗೂ ಮಹಿಳೆಯರ ಏಳ್ಗೆಗೆ ಮೈತ್ರಿ ಸರ್ಕಾರ ವಿಶೇಷ ಗಮನ ನೀಡಿದೆ. 2018-19 ನೇ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಅನುಮೋದಿತವಾಗಿದ್ದ 178.52 ಕೋಟಿ ರೂ.ಗಳಲ್ಲಿ  153.77 ಕೋಟಿ ರೂಪಾಯಿ ವೆಚ್ಚ ಮಾಡಿ, 810 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 462 ಕಾಮಗಾರಿಗಳು ಪೂರ್ಣಗೊಂಡಿವೆ. 2019-20 ನೇ ಸಾಲಿನಲ್ಲಿ ಜಿಲ್ಲೆಗೆ 151 ಕೋಟಿ ರೂ.ಮಂಜೂರಾಗಿದೆ. ಮುಖ್ಯಮಂತ್ರಿಗಳ ಕಾರ್ಯದ ಮಾದರಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಗ್ರಾಮ ವಾಸ್ತವ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಂಡ್ರಕಿ ಗ್ರಾಮದ ಹಲವಾರು ರೈತರಿಗೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ,ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕ ಶರಣಬಸಪ್ಪ ದರ್ಶನಾಪೂರ, ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಹೆಚ್.ಕೋನರಡ್ಡಿ ಮತ್ತಿತರರು ಇದ್ದರು.
 

Trending News