ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಮುಂಬಯಿಯಲ್ಲಿ ರೋಡ್‌ ಶೋ

ಉತ್ತರಕರ್ನಾಟಕ ಹಾಗೂ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಮುಂಬಯಿಯಲ್ಲಿ ರೋಡ್‌ ಶೋ ನಡೆಸಲಾಗುತ್ತಿದ್ದು ಇದರಲ್ಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾಗಿಯಾಗಲಿದ್ದಾರೆ.

Last Updated : Dec 23, 2019, 07:51 AM IST
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಮುಂಬಯಿಯಲ್ಲಿ ರೋಡ್‌ ಶೋ title=
Photo Courtesy: DNA

ಬೆಂಗಳೂರು: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್‌ ಜೋಷಿ ಅವರ ಜೊತೆಯಲ್ಲಿ ಮುಂಬಯಿಯಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಎರಡು ದಿನಗಳ ಕಾಲ ಸರಣಿ ಸಭೆಯನ್ನು ನಡೆಸಲಿದ್ದೇವೆ ಎಂದು ಕೈಗಾರಿಕ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ. 

ಈ ಬಗ್ಗೆ ಭಾನುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಈ ರೋಡ್‌ ಶೋ ನಲ್ಲಿ ಭಾಗವಹಿಸಲಿದ್ದು, ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶ ದಲ್ಲಿ ಭಾಗವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. 

ಗಮನಾರ್ಹವಾಗಿ ಭಾನುವಾರ ಸಂಜೆ ಇ-ಶಾಂಗ್‌ ರೆಡ್‌ವುಡ್‌ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ದಕ್ಷಿಣ ಭಾರತದ ಮುಖ್ಯಸ್ಥರ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ. ಅಲ್ಲದೆ, ಭಾನುವಾರ ರಾತ್ರಿ ಹಿಂದೂಜಾ ಗ್ರೂಪ್‌ ಆಫ್‌ ಕಂಪನಿಗಳ ಪ್ರಮುಖರ ಜೊತೆಯಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು.

ಸೋಮುವಾರ ಬೆಳಗ್ಗೆಯಿಂದ ಕೈಗಾರಿಕೋದ್ಯಮಿಗಳ ಜೊತೆ ಸರಣಿ ಸಭೆಗಳನ್ನು ಆಯೋಜಿಸಲಾಗಿದೆ. ಟಾಟಾ ಗ್ರೂಫ್‌ ನ ಅಧ್ಯಕ್ಷರಾದ ಚಂದ್ರಶೇಖರನ್‌, ಮಹೀಂದ್ರ & ಮಹಿಂದ್ರ ಲಿಮಿಟೆಡ್‌ ನ ಅಧ್ಯಕ್ಷರಾದ ಆನಂದ್‌ ಮಹೀಂದ್ರ, ಗೋದ್ರೇಜ್‌ ಗ್ರೂಪ್‌ ನ ಅಧ್ಯಕ್ಷರಾದ ಆದಿ ಗೋದ್ರೇಜ್‌ ಜೊತೆಯಲ್ಲಿ ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. ಇದಕ್ಕೂ ಮುನ್ನ ಕನ್ಯೂಮರ್‌ ಗೂಡ್ಸ್‌ ಕಂಪನಿಗಳಾದ, ಜ್ಯೋತಿ ಲ್ಯಾಬ್ಸ್‌ ಲಿಮಿಟೆಡ್‌, ಎಸಿಸಿ ಲಿಮಿಟೆಡ್‌, ಹುಟಮಕಿ ಪಿಪಿಲ್‌ ಲಿಮಿಟೆಡ್‌, ಜೋನ್ಸ್‌ ಲ್ಯಾಂಗ್‌ ಲ್ಯಾಸೆಲ್ಲೆ, ಇಂಡಕೌಂಟ್‌, ಪ್ರಮುಖರ ಜೊತೆಯಲ್ಲಿಯೂ ಸಭೆಗಳು ನಡೆಯಲಿವೆ ಎಂದು ಹೇಳಿದರು. 

ಸಂಜೆ ನಾರಿಮನ್‌ ಪಾಯಿಂಟ್‌ ನಲ್ಲಿರುವ ಟ್ರಿಡೆಂಟ್‌ ಹೋಟೇಲ್‌ ನಲ್ಲಿ ರೋಡ್‌ ಶೋ ನಡೆಯಲಿದ್ದು, ರಾಜ್ಯದಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ ಹಾಗೂ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿಯನ್ನು ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಹೂಡಿಕೆಯನ್ನು ಮಾಡಿರುವ ಕೈಗಾರಿಕೋದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳಲಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ. 

ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಫೆಬ್ರವರಿ ಎರಡನೇ ವಾರದಲ್ಲಿ ಈ ಸಮಾವೇಶ ನಡೆಯಲಿದ್ದು, ಮುಂದಿನ ಹಂತದಲ್ಲಿ ಬೆಳಗಾವಿ, ಗುಲ್ಬರ್ಗಾ, ಮೈಸೂರು, ದಾವಣಗೆರೆ, ಮಂಗಳೂರು, ಹಾಸನ, ಹಾಗೂ ಶಿವಮೊಗ್ಗ ಸೇರಿದಂತೆ ಎರಡನೇ ಹಂತದ ನಗರಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು ಹೇಳಿದರು. 

ರಾಜ್ಯದಲ್ಲಿ ವಿಮಾನ ಸಂಪರ್ಕ ಹೆಚ್ಚಾಗಿದೆ. ಕೈಗಾರಿಕೋದ್ಯಮಿಗಳು ಬೆಂಗಳೂರು ಹೊರತುಪಡಿಸಿ ಇತರೇ ಜಿಲ್ಲೆಗಳಲ್ಲೂ ಹೂಡಿಕೆ ಮಾಡಲು ಇದು ಅನುಕೂಲ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಹೂಡಿಕೆಯ ವಾತಾವರಣ ಬದಲಾಗಿದೆ. ಈಗಾಗಲೇ ಹೈದರಾಬಾದ್‌, ಮಹಾರಾಷ್ಟ್ರ ಹಾಗೂ ಇನ್ನಿತರೆ ರಾಜ್ಯಗಳ ಕೈಗಾರಿಕೋದ್ಯಮಿಗಳು ನಮ್ಮ ಜೊತೆ ಚರ್ಚೆ ನಡೆಸಿದ್ದು, ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಇವರಿಗೆ ಅಗತ್ಯವಿರುವ ಅನುಕೂಲತೆಗಳನ್ನು ರಾಜ್ಯ ಸರಕಾರ ಮಾಡಿಕೊಡುತ್ತಿದೆ ಎಂದು ಶೆಟ್ಟರ್ ಭರವಸೆ ನೀಡಿದರು.

ಈ ರೋಡ್‌ ಶೋ ನಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣಾ ಸೇರಿದಂತೆ ಮತ್ತು ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

Trending News