ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮಿಳಾ ಉಮಾಶಂಕರ್(44 ವರ್ಷ) ತೀವ್ರ ಹೃದಯಾಘಾತದಿಂದ ಗುರುವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಶ್ರೀಮತಿ ರಮೀಳಾ ಉಮಾಶಂಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವುಂಟಾಗಿದೆ. ರಮೀಳಾ ಅವರ ಅಗಲಿಕೆ ನಮ್ಮ ಪಕ್ಷಕ್ಕೆ ತುಂಬಲಾಗದ ನಷ್ಟ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ತೀರ್ವ ಸಂತಾಪ ಸೂಚಿಸಿದ್ದಾರೆ.
ರಮಿಳಾ ಉಮಾಶಂಕರ್ ಅತೀ ಚಿಕ್ಕ ವಯ್ಯಸ್ಸಿನ್ನಲ್ಲೇ ಸಮಾಜದ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದ ಕ್ರಿಯಾಶೀಲಾ ಮಹಿಳೆ. ಉಪ ಮಹಾಪೌರರಾದ ಕೇವಲ ಒಂದೇ ವಾರದಲ್ಲಿ ಬೆಂಗಳೂರು ನಗರದಲ್ಲಿ ಉತ್ತಮ ಕೆಲಸ ಮಾಡಲು ಪ್ರಾರಂಭಿಸಿದರು. ಈ ದಿನ ಅವರ ಅಗಲಿಕೆಯಿಂದ ನಮ್ಮ ಪಕ್ಷಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದರು.
ಬೆಂಗಳೂರಿನ ಕಾವೇರಿಪುರ ವಾರ್ಡ್ ನ ಬಿಬಿಎಂಪಿಯ ಜೆಡಿಎಸ್ ಸದಸ್ಯರಾಗಿದ್ದ ಹಾಲಿ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ಅವರ ಹಠಾತ್ ನಿಧನ ನಮ್ಮ ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಕೇವಲ 44 ವರ್ಷದ ಇವರು ನಮ್ಮ ಪಕ್ಷದ ಬೆನ್ನೆಲುಬಾಗಿ ಕೆಲಸಮಾಡಿದ್ದರು. ಇವರ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಶೋಕ ಭರಿಸುವ ಶಕ್ತಿ ನೀಡಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸಂತಾಪ ಸೂಚಿಸಿದರು.
ರಮೀಳಾ ಉಮಾಶಂಕರ್ ಸಾವು ಪಕ್ಷಕ್ಕೆ ದೊಡ್ಡ ಆಘಾತ. ಸುಮಾರು 25 ವರ್ಷಗಳಿಂದ ಅವರ ಕುಟುಂಬ ನಮಗೆ ಪರಿಚಯವಿದೆ. ರಮೀಳಾ ಅವರ ನಿಧನದಿಂದ ಗೋವಿಂದರಾಜನಗರ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾವನ್ನ ನಂಬಲೂ ಆಗುತ್ತಿಲ್ಲ.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶಾಸಕ ಗೋಪಾಲಯ್ಯ ತಮ್ಮ ಸಂತಾಪ ಸೂಚಿಸಿದ್ದಾರೆ.