ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರ "ಹವಾ" ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೋದಿ ಅವರ ಹವಾ ಕಡಿಮೆ ಆಗುತ್ತಿದೆ ಎಂಬುದರಲ್ಲಿ ಎರಡನೇ ಮಾತೇ ಇಲ್ಲ ಎಂದರು. 2014ರ ಚುನಾವಣೆಗೂ ಮುನ್ನ ಮೋದಿ ಅವರು ಜನರನ್ನು ಭಾವನಾತ್ಮಕವಾಗಿ ಎತ್ತಿ ಕಟ್ಟಿದ್ದರು. ಜತೆಗೆ ಚುನಾವಣಾ ಪೂರ್ವದಲ್ಲಿ ಜನರಿಗೆ ಅವರು ನೀಡಿದ್ದ ಭರವಸೆಗಳೂ ಹುಸಿಯಾಗಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಸ್ತುತ ಬಾರಿ ಸದ್ದು ಮಾಡುತ್ತಿರುವ ಗುಜರಾತ್ ವಿಧಾನಸಭೆ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಆಶಾದಾಯಕವಾಗಿದೆ. ಪಟೇಲ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಬಿಜೆಪಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಅವರ ಬಹಿರಂಗ ಸಭೆಗಳಿಗೂ ಜನ ಸೇರುತ್ತಿಲ್ಲ. ಇದು ಬಿಜೆಪಿಗೆ ಭಾರಿ ಹಿನ್ನೆಡೆ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ 20 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬುದು ಊಹಾಪೋಹಗಳ ಪ್ರತಿಕ್ರಿಯಿಸಿದ ಸಿಎಂ, ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಭಿಪ್ರಾಯ ಆಧರಿಸಿ ಟಿಕೆಟ್ ನೀಡಲಾಗುವುದು ಎಂದು ಸ್ಪಷ್ಟ ಪಡಿಸಿದರು.