ಚುನಾವಣೆಯಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ

 ಕಾರ್ಯಕರ್ತರು ಹಾಗೂ ಮುಖಂಡರಿಂದ ಪಡೆದ ಸಮೀಕ್ಷೆ ವರದಿ ಪ್ರಕಾರ ಹಾಸನದಲ್ಲಿ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Last Updated : Apr 22, 2019, 07:03 PM IST
ಚುನಾವಣೆಯಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ title=

ಹಾಸನ: ಲೋಕಸಭೆ ಚುನಾವಣೆಯಲ್ಲಿ ಸುಮಾರು 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ತಿಂಗಳುಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿಗಳ ಕೈ ಹಿಡಿಯಲಿವೆ. ಹಾಗಾಗಿ ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ. ಕಾರ್ಯಕರ್ತರು ಹಾಗೂ ಮುಖಂಡರಿಂದ ಪಡೆದ ಸಮೀಕ್ಷೆ ವರದಿ ಪ್ರಕಾರ ಹಾಸನದಲ್ಲಿ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ತಮಗೆ ಕಾಂಗ್ರೆಸ್​ನ ಶೇ.90 ಕಾರ್ಯಕರ್ತರು, ಮುಖಂಡರು ನಂಗೆ ಬೆಂಬಲ ಕೊಟ್ಟಿದ್ದಾರೆ. ಕೆಲ ಶಾಸಕರು,  ಕಾಂಗ್ರೆಸ್ ಮುಖಂಡರು ನನ್ನ ತಂದೆಯ ಸ್ಥಾನದಲ್ಲಿದ್ದು ಕೆಲಸ ಮಾಡಿದ್ದಾರೆ, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಇನ್ನು ನಾಮಪತ್ರ ಸಲ್ಲಿಸುವ ವೇಳೆ ಅಪೂರ್ಣ ದಾಖಲಾತಿ ಸಲ್ಲಿಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಜ್ವಲ್, ಜನಾಶೀರ್ವಾದ ಇಲ್ಲದ ಸಂದರ್ಭದಲ್ಲಿ ವಿರೋಧಿಗಳು ಬೇರೆ ದಾರಿಗಳನ್ನು ಹುಡುಕುತ್ತಾರೆ. ದೇಶದ ಪ್ರಜಾಪ್ರಭುತ್ವ ದೊಡ್ಡದು. ಅದರ ಮುಂದೆ ಯಾರೂ ದೊಡ್ಡವರಲ್ಲ. ಹಾಗೇನಾದರೂ ನನ್ನ ವಿರುದ್ಧ ದಾಖಲಾತಿಗಳಿದ್ದರೆ ಎ.ಮಂಜು ನ್ಯಾಯಾಲಯದ ಮೆಟ್ಟಿಲು ಏರಲಿ. ಅಲ್ಲಿಯೇ ಸೂಕ್ತ ಉತ್ತರ ಕೊಡುತ್ತೇನೆ ಎಂದು ಪ್ರಜ್ವಲ್ ತಮ್ಮ ವಿರೋಧಿಗಳಿಗೆ ಸವಾಲೆಸೆದರು.
 

Trending News