ಕರ್ನಾಟಕದಲ್ಲಿರುವುದು ರಿಮೋಟ್ ಕಂಟ್ರೋಲ್ ಸರ್ಕಾರ: ಕಲಬುರಗಿಯಲ್ಲಿ ಪ್ರಧಾನಿ ಮೋದಿ

ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದ್ದು, ದಶಕಗಳ ನಿರೀಕ್ಷೆಯ ಬಳಿಕ ಬೀದರ್-ಕಲಬುರಗಿ ರೈಲ್ವೇ ಮಾರ್ಗವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸಿದೆ. 

Last Updated : Mar 6, 2019, 02:44 PM IST
ಕರ್ನಾಟಕದಲ್ಲಿರುವುದು ರಿಮೋಟ್ ಕಂಟ್ರೋಲ್ ಸರ್ಕಾರ: ಕಲಬುರಗಿಯಲ್ಲಿ ಪ್ರಧಾನಿ ಮೋದಿ title=

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಸಿಲ ನಾಡಿನಲ್ಲಿ ಕಮಲ ಅರಳಿಸುವ ಪಣದೊಂದಿಗೆ ಬಿಜೆಪಿ ಬೃಹತ್‌ ರ‍್ಯಾಲಿಯಲ್ಲಿ ರಣಕಹಳೆ ಮೊಳಗಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ,  ಕರ್ನಾಟಕ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಇಲ್ಲಿನ ಮುಖ್ಯಮಂತ್ರಿಯ ರಿಮೋಟ್​ ಮತ್ತೊಬ್ಬರ ಬಳಿ ಇದೆ. ಅಧಿಕಾರದಾಹಿ ಕಾಂಗ್ರೆಸ್ ರಿಮೋಟ್ ಮೂಲಕ ಸರ್ಕಾರವನ್ನು ನಿಯಂತ್ರಿಸುತ್ತಿದೆ. ಅವರು ಹೇಳಿದಂತೆ ಇವರು ಕೇಳಬೇಕು ಎಂದು ರಾಜ್ಯದ ಮೈತ್ರಿ ಸರ್ಕಾರದ ಆಡಳಿತ ಲೋಪಗಳನ್ನು ಟೀಕಿಸುವ ಜೊತೆಗೆ ಅಭಿವೃದ್ಧಿ ವಿಷಯದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.

ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಲಬುರಗಿಗೆ ಬಂದಿದ್ದಕ್ಕೆ ಅತ್ಯಂತ ಸಂತೋಷವಾಗಿದೆ. ಇದು ಪರಿಶ್ರಮ ಮತ್ತು ಸೇವೆ ಪ್ರತೀಕವಾಗಿದೆ. ಕಲಬುರ್ಗಿಯ ಆರಾಧ್ಯ ದೇವತೆಗಳಾದ ಭಗವಾನ್ ಶರಣ ಬಸವೇಶ್ವರ, ಹನುಮಾನ್ ಗೆ ನಮನ ಸಲ್ಲಿಸಿದರಲ್ಲದೆ, ಜನಸಂಘ ಆರ್ ಎಸ್ ಎಸ್ ಗೆ ಕಲಬುರಗಿ ನಿಷ್ಠಾವಂತ ಕಾರ್ಯಕರ್ತರನ್ನು ಕೊಟ್ಟಿದೆ ಎಂದು ಸ್ಮರಿಸಿದರು.

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೊಟ್ಟಿದೆ. ಕಲಬುರಗಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಪೂರ್ಣಗೊಳಿಸಿದ್ದು ನಾವು. ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದ್ದು, ದಶಕಗಳ ನಿರೀಕ್ಷೆಯ ಬಳಿಕ ಬೀದರ್-ಕಲಬುರಗಿ ರೈಲ್ವೇ ಮಾರ್ಗವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸಿದೆ ಎಂದು ಹೇಳಿದರು.

ಇಂದು ಒಂದು ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. 56 ಎಕರೆಯಲ್ಲಿ ಬಿಪಿಎಲ್ ಘಟಕ ವಿಸ್ತರಿಸಿದ್ದೇವೆ. ರಾಯಚೂರಿನಲ್ಲಿದ್ದ  ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಪೂರೈಸಲು ಸಣ್ಣದೆನಿಸಿದ ಕಾರಣ  56 ಎಕರೆ ಜಾಗದಲ್ಲಿ ಹೊಸ ಪೆಟ್ರೋಲಿಯಂ ಡಿಪೋ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈ  56 ಅನ್ನೋ ನಂಬರ್​ ಕೇಳಿದರೆ ಕೆಲವರಿಗೆ ಆಗೋದಿಲ್ಲ . ಈ ಅಂಕಿ ಕೇಳಿದಾಕ್ಷಣ ಕಾಂಗ್ರೆಸ್​ ನಾಯಕರ ನಿದ್ದೆ ಹಾರಿಹೋಗುತ್ತದೆ ಎಂದು ವ್ಯಂಗ್ಯವಾಡಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ 10,000ಕ್ಕೂ ಅಧಿಕ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಬೇಕೆನ್ನುವುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಕಿಮ್ಸ್ ಆಸ್ಪತ್ರೆ ವಿಸ್ತರಣೆಯಿಂದ 2,500 ಹೊಸ ಬೆಡ್ ಗಳು ಸೇರ್ಪಡೆಯಾಗಿವೆ. ಬೆಂಗಳೂರಿನಲ್ಲಿ ಇಎಸ್ಐ ಮೆಡಿಕಲ್ ಕಾಲೇಜು ಲೋಕಾರ್ಪಣೆ ಮಾಡಲಾಗಿದೆ. ಕಾಂಗ್ರೆಸ್ ಅಭಿವೃದ್ಧಿಗೆ ಇಲ್ಲನ ಕಾಲೇಜಿನ ಅಭಿವೃದ್ಧಿಯೇ ಸಾಕ್ಷಿ ಎಂದು ಮೋದಿ ಹೇಳಿದರು.

Trending News