ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂಗೆ ಹೇಳ್ತಾರೆ. ಅವರು ಸಲ್ಲು ಹೇಳೋದ್ರಲ್ಲಿ ನಂಬರ್ ಒನ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಪ್ರಚಾರ ಮಾಡಲು ಆಗಮಿಸಿದ್ದ ಖರ್ಗೆ ಅವರು, ಸಾವಳಗಿ ಗ್ರಾಮದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ ಬಿಜೆಪಿ ಸರ್ಕಾರ, ವಿದೇಶದಲ್ಲಿರುವ ಕಪ್ಪು ಹಣ ತಂದು, ದೇಶದ ಸಾಮಾನ್ಯ ಜನತೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಅದನ್ನೂ ಮಾಡಲಿಲ್ಲ. ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಿ ಮೋದಿ ಅವರು ಸುಳ್ಳುಗಳನ್ನು ಹೇಳುತ್ತಲೇ ಜನರಿಗೆ ಮೋಸ ಮಾಡುತ್ತಾ ಬಂದಿದ್ದಾರೆ ಎಂದು ಖರ್ಗೆ ಟೀಕಿಸಿದರು.
ಮುಂದುವರೆದು ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಪೆಟ್ರೋಲ್ ಬೆಲೆ ಏರುತ್ತಲೇ ಇದೆ, ರೈತರನ್ನ ಉದ್ಧಾರ ಮಾಡುವ ಬಿಜೆಪಿಯವರು ಎಲ್ಲಿ ಹೋದ್ರು? ಅವರ ಬಗ್ಗೆ ಪ್ರಚಾರ ಮಾಡೋ ಛೇಲಾಗಳೆಲ್ಲ ಎಲ್ಲಿ ಹೋದ್ರು? ಕಿಡಿಕಾರಿದರಲ್ಲದೆ, ಕೆಲಸ ಮಾಡಿದವರಿಗೆ ವೋಟ್ ಹಾಕುತ್ತಿರಾ? ಅಥವಾ ಸುಳ್ಳು ಹೇಳುವವರಿಗೆ ಮತದಾನ ಮಾಡುತ್ತಿರಾ ಎಂದು ಖರ್ಗೆ ಪ್ರಶ್ನಿಸಿದರು.
ರಫೆಲ್ ಯುದ್ಧ ವಿಮಾನ ಹಗರಣ ಮುಚ್ಚಿಹಾಕಲು ರಾತ್ರೋ ರಾತ್ರಿ ಸಿಬಿಐ ನಿರ್ದೇಶಕರನ್ನು ತೆಗೆದು ಹಾಕಿದರು, ಗೋವುಗಳ ಚರ್ಮ ಸುಲಿಯುವ ದಲಿತರಿಗೆ ಗೋವು ಕಳ್ಳರೆಂದು ಹಲ್ಲೆ ಮಾಡಿದರು. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಚಕಾರ ಎತ್ತಲಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.