ಪ್ರಧಾನಿಗೆ ಸತ್ಯಮೇವ ಜಯತೇ ಎಂಬುದರ ಅರ್ಥವೇ ತಿಳಿದಿಲ್ಲ: ರಾಹುಲ್ ಗಾಂಧಿ ವ್ಯಂಗ್ಯ

ಒಂದು ಮಗುವಿಗೂ ಕೂಡ 'ಸತ್ಯಮೇವ ಜಯತೇ' ಎಂಬುದರ ಅರ್ಥ ತಿಳಿದಿದೆ. ಆದರೆ ನಮ್ಮ ಪ್ರಧಾನಿಗೆ ಇದರ ಅರಿವೇ ಇಲ್ಲ ಎಂದು ರಾಹುಲ್ ಟೀಕಿಸಿದ್ದಾರೆ.

Last Updated : Mar 21, 2018, 07:46 PM IST
ಪ್ರಧಾನಿಗೆ ಸತ್ಯಮೇವ ಜಯತೇ ಎಂಬುದರ ಅರ್ಥವೇ ತಿಳಿದಿಲ್ಲ: ರಾಹುಲ್ ಗಾಂಧಿ ವ್ಯಂಗ್ಯ title=
Pic : Twitter

ಚಿಕ್ಕಮಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

3 ನೇ ಹಂತದ 'ಜನಾಶೀರ್ವಾದ ಯಾತ್ರೆ'ಯ 2ನೇ ದಿನವಾದ ಇಂದು ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಒಂದು ಮಗುವಿಗೂ ಕೂಡ 'ಸತ್ಯಮೇವ ಜಯತೆ' ಎಂಬುದರ ಅರ್ಥ ತಿಳಿದಿದೆ. ಆದರೆ ನಮ್ಮ ಪ್ರಧಾನಿಗೆ ಇದರ ಅರಿವೇ ಇಲ್ಲ ಎಂದು ಟೀಕಿಸಿದರಲ್ಲದೆ, 2014ರ ಸಾರ್ವತ್ರಿಕ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮೋದಿ ನೀಡಿದ ಭರವಸೆಗಳನ್ನು ಖಂಡಿಸಿದರು. 

"ನಾನು ಆದಿ ಶಂಕರಾಚಾರ್ಯರ ಕರ್ಮಭೂಮಿ ಶೃಂಗೇರಿಗೆ ಮಠಕ್ಕೆ ಹೋಗಿದ್ದೆ. ಅಲ್ಲಿ ಮಕ್ಕಳಿಗೆ ಧರ್ಮದ ಬಗ್ಗೆ ಕಲಿಸಲಾಗುತ್ತಿತ್ತು. 14 ವರ್ಷದ ಬಾಲಕ ಕೂಡ ಸತ್ಯಮೇವ ಜಯತೆ ಹೇಳುತ್ತಾನೆ. ಆದರೆ ನಮ್ಮ ದೇಶದ ಪ್ರಧಾನಿಗೆ ಅದರ ಅರ್ಥವೂ ತಿಳಿದಿಲ್ಲ" ಎಂದು ವ್ಯಂಗ್ಯ ಮಾಡಿದರು. 

ಮುಂದುವರಿದು ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುವ ಪ್ರಧಾನಿಯವರು, ತಮ್ಮದೇ ಪಕ್ಷದ ಭ್ರಷ್ಟಾಚಾರ ನಡೆಸಿದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಜಯ್ ಶಾ, ನೀರವ್ ಮೋದಿ ಮೊದಲಾದವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅವರಲ್ಲಿ ಮೋದಿಗೆ ಭ್ರಷ್ಟಾಚಾರ ಕಾಣುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಇದುವರೆಗೆ ರಫೆಲ್ ವಿಮಾನದ ಬಗ್ಗೆ ಅದೆಷ್ಟೋ ಪ್ರಶ್ನೆಗಳು ಸುರಿಮಳೆಗರೆದಿದ್ದರೂ, ಅದರ ಬೆಲೆ ಎಷ್ಟು ಎಂದು ಮಾತ್ರ ಪ್ರಧಾನಿ ಹೇಳುವುದಿಲ್ಲ. ಹಾಗೆಯೇ ಚೀನಾ ದೋಕ್ಲಮ್ ಗಡಿಯಲ್ಲಿ ಹೆಲಿಪ್ಯಾಡ್ ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಈ ಬಗ್ಗೆ ಮೋದಿ ಮಾತ್ರ ಏನೂ ಅರಿಯದಂತೆ ಮೌನ ವಹಿಸಿದ್ದಾರೆ ಎಂದು ರಾಹುಲ್ ಆರೋಪಿಸಿದರು. 

ತಾವು ಚಿಕ್ಕಮಗಳೂರಿಗೆ ಬಂದಿರುವ ಕುರಿತು ಮಾತನಾಡಿದ ಅವರು, ನನ್ನ ಅಜ್ಜಿಯ ಕಷ್ಟದ ದಿನಗಳಲ್ಲಿ ನೀವು ಸಹಾಯ ಮಾಡಿದ್ದೀರಿ. ರಾಜಕೀಯ ವಿರೋಧಿಗಳು ಅವರನ್ನು ಸೋಲಿಸಲು ಪ್ರಯತ್ನಿಸಿದಾಗ ಅವರ ಜೊತೆ ನೀವು ನಿಂತು ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೀರಿ. ಅಂತಹ ಸ್ಥಳಕ್ಕೆ ನಾನಿಂದು ಬಂದಿದ್ದೇನೆ, ಚಿಕ್ಕಮಗಳೂರಿಗೆ ಬಂದಿರುವುದು ನನಗೆ ಅತೀವ ಸಂತೋಷ ನೀಡಿದೆ. ನಿಮ್ಮ ಉಪಕಾರವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು. 

Trending News