ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮನಗೆಲ್ಲಲು ಬಿಜೆಪಿ ಸ್ಲಂ ವಾಸ್ತವ್ಯಕ್ಕೆ ಮುಂದಾಗಿದ್ದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಸ್ಲಂನ ವಾಸ್ತವಿಕ ಸ್ಥಿತಿಗತಿಗಳನ್ನು ಅರಿತು ಸಮಸ್ಯೆಗಳಿಗೆ ನ್ಯಾಯ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಉದ್ದೇಶದಿಂದ ಸ್ಲಂಗಳ ವಾಸ್ತವ್ಯಕ್ಕೆ ಬಿಜೆಪಿ ಮುಂದಾಗಿದ್ದು, ಕಾಂಗ್ರೆಸ್ ಹೇಗೆ ಸ್ಲಂ ನಿವಾಸಿಗಳ ಅಭಿವೃದ್ಧಿಯನ್ನು ಮರೆತಿದೆ ಎಂಬ ಕುರಿತು 'ದೌರ್ಭಾಗ್ಯ' ಎಂಬ ದಾಖಲೆಯುಕ್ತ ಪುಸ್ತಕ ಬಿಡುಗಡೆಗೊಳಿಸಲಿದೆ ಎಂದು ತಮ್ಮ ಟ್ವೀಟ್ ಮಾಡಿದ್ದರು.
ಸ್ಲಂನ ವಾಸ್ತವಿಕ ಸ್ಥಿತಿಗತಿಗಳನ್ನು ಅರಿತು ಸಮಸ್ಯೆಗಳಿಗೆ ನ್ಯಾಯ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಉದ್ದೇಶದಿಂದ ಲಕ್ಷ್ಮಣಪುರ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದೆ. ಇದೇ ವೇಳೆ, ಕಾಂಗ್ರೆಸ್ ಹೇಗೆ ಸ್ಲಂ ನಿವಾಸಿಗಳ ಅಭಿವೃದ್ಧಿಯನ್ನು ಮರೆತಿದೆ ಎಂಬ ಕುರಿತು 'ದೌರ್ಭಾಗ್ಯ' ಎಂಬ ದಾಖಲೆಯುಕ್ತ ಪುಸ್ತಕ ಬಿಡುಗಡೆಗೊಳಿಸಿದೆ. pic.twitter.com/h2N2qeuAF5
— B.S. Yeddyurappa (@BSYBJP) February 11, 2018
ಅದಕ್ಕೆ ಟ್ವೀಟ್ ಮೂಲಕವೇ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ್ದು ಒಂದು ಹೊತ್ತಿನ ಊಟ, ಒಂದು ರಾತ್ರಿಯ ವಾಸ್ತವ್ಯದ ಕಣ್ಣುಕಟ್ಟಿನ ದಲಿತ ಪ್ರೀತಿ ಅಲ್ಲ. ದಲಿತರೊಂದಿಗೇ ಬೆರೆತು, ಆ ಅನುಭವದಿಂದಾಗಿಯೇ ಪರಿಶಿಷ್ಟ ಜಾತಿ- ಗಿರಿಜನರ ಅಭಿವೃದ್ಧಿಗೆ ಹಲವು ಕಾಯ್ದೆ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ನಮ್ಮದು ಒಂದು ಹೊತ್ತಿನ ಊಟ, ಒಂದು ರಾತ್ರಿಯ ವಾಸ್ತವ್ಯದ ಕಣ್ಣುಕಟ್ಟಿನ ದಲಿತ ಪ್ರೀತಿ ಅಲ್ಲ, ನಾವು ಅವರೊಂದಿಗೆ ಒಂದಾಗಿ ಬದುಕಿದವರು. ಆ ಅನುಭವದಿಂದಾಗಿಯೇ ಯೋಜನಾ ವೆಚ್ಚದ ಕಾಲು ಭಾಗವನ್ನು ಅವರಿಗಾಗಿ ಮೀಸಲಿಡುವ ' ಪರಿಶಿಷ್ಟ ಜಾತಿ- ಗಿರಿಜನ ಉಪಯೋಜನೆ ಕಾಯ್ದೆ ಜಾರಿಗೊಳಿಸಿದ್ದೇವೆ. #BSYeddyurappa
— Siddaramaiah (@siddaramaiah) February 12, 2018
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಗಮನಸೆಳೆಯುವ ತಂತ್ರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಬಿಜೆಪಿ ಮುಖಂಡರು ಫೆ.10ರಂದು ಸ್ಲಂ ವಾಸ್ತವ್ಯ ಹೂಡಿದ್ದರು.
ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸ್ಲಂವೊಂದರಲ್ಲಿ ಯಡಿಯೂರಪ್ಪ ವಾಸ್ತವ್ಯ ಹೂಡಿದ್ದರಲ್ಲದೆ, ರಾಜ್ಯದ 2800 ಸ್ಲಂಗಳಲ್ಲಿ ಆಯಾ ಜಿಲ್ಲೆಯ ಬಿಜೆಪಿ ಮುಖಂಡರು ವಾಸ್ತವ್ಯ ಹೂಡಲಿದ್ದಾರೆ ಎಂದು ತಿಲಿಸಿದ್ದರು. ಅಲ್ಲದೆ, ಮಾರ್ಚ್ ತಿಂಗಳಿನಲ್ಲಿ ಸ್ಲಂ ನಿವಾಸಿಗಳ ಸಮಾವೇಶ ನಡೆಯಲಿದ್ದು, ಅಂದು ಸ್ಲಂಗಳ ಸ್ಥಿತಿಗತಿಗಳ ಕುರಿತು ವರದಿ ತಯಾರಿಸುವುದಾಗಿಯೂ ಪಕ್ಷ ತಿಳಿಸಿತ್ತು.