ಬೆಂಗಳೂರು: ಫಲಿತಾಂಶದ ಕುರಿತು ಬಂದಿರುವ ಸಮೀಕ್ಷಾ ವರದಿಗಳು ಅಮಿತ್ ಶಾ ಹೇಳಿ ಮಾಡಿಸಿದಂತಿದೆ. ಕೇಂದ್ರದಲ್ಲಿ ಈ ಬಾರಿ ಬಿಜೆಪಿಯೇತರ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಭವಿಷ್ಯ ನುಡಿದಿದ್ದಾರೆ.
ಪಕ್ಷ ತಾಯಿ ಇದ್ದಂತೆ. ತಾಯಿ ಪಕ್ಷಕ್ಕೆ ಯಾರೇ ಮುಜುಗರ ತರುವ ಕೆಲಸ ಮಾಡಿದರು ಅಥವಾ ಹೇಳಿಕೆ ನೀಡಿದರು ಅದನ್ನು ನಿಯಂತ್ರಿಸುವ ಕೆಲಸ ಆಗಬೇಕು ಎಂದು ಡಾ.ಜಿ. ಪರಮೇಶ್ವರ ಹೇಳಿದರು.
ರಾಜೀವ್‌ಗಾಂಧಿ ಅವರ 28ನೇ ಪುಣ್ಯತಿಥಿಯಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ. ಆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ರಾಹುಲ್ ಗಾಂಧಿ ಅವರು ಎಲ್ಲ ಸರ್ವಸ್ವ ತ್ಯಾಗ ಮಾಡಿ, ಕಾಂಗ್ರೆಸ್ ನನ್ನ ಜೀವನ ಎಂದು ಹೇಳಿಕೊಂಡಿದ್ದಾರೆ. ಆ ನಾಯಕನ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜೀವ್ ಗಾಂಧಿ ಅವರು ದೇಶದ ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ತಂದು ಕೊಟ್ಟರು. ಆದರೆ ಯುವಕರಿಗೆ ಈ ಸತ್ಯ ಅರಿವಾಗಿಲ್ಲ. ಮೋದಿ ಪರ ಯುವಕರಿದ್ದಾರೆ ಎಂದು ಹೇಳುತ್ತಾರೆ. ಯುವಕರ ಕಣ್ಣಿಗೆ ಪೊರೆ ಆವರಿಸಿದೆ. ತಮಗೆ ಮತದಾನದ ಹಕ್ಕು ನೀಡಿದ ರಾಜೀವ್‌ಗಾಂಧಿ ಹಾಗೂ ಕಾಂಗ್ರೆಸ್ ಎಂಬ ಸತ್ಯ ಅರಿಯುವಂತೆ ಮಾಡುವ ಕೆಲಸ ಕಾಂಗ್ರೆಸ್‌ನ ಕೈಯಲ್ಲಿದೆ ಎಂದರು.