ಬೆಂಗಳೂರು: ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ನೈಋತ್ಯ ರೈಲ್ವೆ ಇಲಾಖೆ ಮಂಗಳೂರು-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ರಾತ್ರಿ ಹೊಸ ರೈಲು ಆರಂಭಿಸಲು ರೈಲ್ವೆ ಬೋರ್ಡ್ಗೆ ಪ್ರಸ್ತಾವನೆ ಸಲ್ಲಿಸಿದೆ.
ಕೆಲವೇ ದಿನಗಳಲ್ಲಿ ನೂತನ ರೈಲು ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿದ್ದು, ಫೆ.20ರ ಒಳಗೆ ಹೊಸ ರೈಲು ಆರಂಭಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳುವಂತೆ ರೈಲ್ವೆ ಸಚಿವಾಲಯಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದಿದೆ.
ಪ್ರಸ್ತಾವಿತ ವೇಳಾಪಟ್ಟಿಯಂತೆ ಹೊಸ ರೈಲು ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ಸಂಜೆ 4.30ಕ್ಕೆ ಯಶವಂತಪುರದಿಂದ ಹೊರಟು ಶನಿವಾರ, ಸೋಮವಾರ ಹಾಗೂ ಬುಧವಾರ ಬೆಳಗಿನ ಜಾವ 4ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಹೊರಡುವ ರೈಲು ಶನಿವಾರ, ಸೋಮವಾರ, ಬುಧವಾರಗಳಂದು ರಾತ್ರಿ 7 ಗಂಟೆಗೆ ಹೊರಟು ಮುಂಜಾನೆ 4.30ಕ್ಕೆ ಯಶವಂತಪುರ ತಲುಪುತ್ತದೆ.
ನೂತನ ರೈಲಿನಿಂದಾಗಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಸುತ್ತಮುತ್ತಲಿನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಈಗಿನ ವೇಳಾಪಟ್ಟಿ ಪ್ರಕಾರ ಬೆಂಗಳೂರಿನಿಂದ ಹೊರಟು ಮಂಗಳೂರು ತಲುಪುವ, ರೈಲಿನ ಹೊರಡುವ ಮತ್ತು ತಲುಪುವ ಸಮಯ ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಇದರ ಬದಲು ರೈಲು ರಾತ್ರಿ 10.30ಗೆ ಯಶವಂತಪುರದಿಂದ ಹೊರಟು ಬೆಳಗ್ಗೆ 8 ಗಂಟೆಗೆ ಮಂಗಳೂರು ತಲುಪಲು ಸಾಧ್ಯವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತು.