ಮೈಸೂರು: ಕಳೆದ ಎಂಟು ದಿನಗಳಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವದ ಬಹುಮುಖ್ಯ ದಿನವಾದ ನಾಳೆ ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೈಸೂರು ನಗರ ನವವಧುವಿನಂತೆ ಸಿಂಗಾರಗೊಂಡಿದೆ.
ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ಪ್ರತಿವರ್ಷ ದಸರಾ ಜಂಬೂ ಸವಾರಿಗೆ 400 ವರ್ಷಗಳ ಇತಿಹಾಸವಿದೆ. ಈ ಉತ್ಸವದ ಕೇಂದ್ರ ಬಿಂದು, ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜೆಪಡೆಯ ವೈಭವಯುತ ಮೆರವಣಿಗೆ ನಾಳೆ ನಡೆಯಲಿದ್ದು, ಈಗಾಗಲೇ ಕ್ಷಣಗಣನೆ ಆರಂಭವಾಗಿದೆ.
ವಿಜಯದಶಮಿಯ ಅಂಗವಾಗಿ ಮಂಗಳವಾರ ನಡೆಯುವ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದು, ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿ ಮಧ್ಯಾಹ್ನ 2.15 ರಿಂದ 2.58 ರ ನಡುವೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಿಸಲಿದ್ದಾರೆ.
ಜಂಬೂ ಸವಾರಿ ಮೆರವಣಿಗೆಗೆ ಚಾಲನೆ
ಬಳಿಕ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಚಾಮುಂಡೇಶ್ವರಿಗೆ ಸಂಜೆ 4.31 ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡುವ ಮೂಲಕ ವೈಭವಯುತ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಶಾಸಕ ರಾಮದಾಸ್ ಪಾಲ್ಗೊಳ್ಳಲಿದ್ದಾರೆ.
ಚಿನ್ನದ ಅಂಬಾರಿ ಹೊರಲಿರುವ ಅರ್ಜುನ
ಬರೋಬ್ಬರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುವ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸತತ ಆರನೇ ಬಾರಿಗೆ ಆನೆ ಅರ್ಜುನ ಹೊರಲಿದ್ದು, ಒಟ್ಟು 11 ಆನೆಗಳು ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಲಿವೆ. ಜಂಬೂ ಸವಾರಿಗಾಗಿಯೇ ವಿಶೇಷವಾಗಿ ಅಲಂಕಾರಗೊಂಡ ಆನೆಗಳನ್ನು ನೋಡುವುದೇ ಒಂದು ಸೊಗಸು.
ಮೆರವಣಿಗೆಗೆ ರಂಗು ನೀಡಲಿರುವ ಸ್ತಬ್ಧ ಚಿತ್ರಗಳು, ಕಲಾ ತಂಡಗಳು
ವಿಶ್ವವಿಖ್ಯಾತ ಜಂಬೂ ಸವಾರಿಗೆ ಮತ್ತಷ್ಟು ಮೆರುಗು ನೀಡಲು ಈ ಬಾರಿ 39 ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು, ಪೊಲೀಸ್ ಮತ್ತು ಅಶ್ವಾರೋಹಿ ದಳಗಳು ಪಾಲ್ಗೊಳ್ಳಲಿದ್ದು, ಮೆರವಣಿಗೆ ವೀಕ್ಷಣೆಗೆ ಅರಮನೆ ಆವರಣದಲ್ಲಿ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪ್ರವಾಸಿಗರಿಗಾಗಿಯೇ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ನಗರಕ್ಕೆ ಆಗಮಿಸಿದ್ದು, ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ಪಂಜಿನ ಕವಾಯತು
ಅರಮೆನೆ ಮೈದಾನದಿಂದ ಹೊರಟ ಜಂಬೂ ಸವಾರಿ ಮೆರವಣಿಗೆ ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪ ತಲುಪಲಿದ್ದು, ಅಲ್ಲಿ ಸಂಪ್ರದಾಯದಂತೆ ಶಮೀಪೂಜೆ ನಡೆಸಲಾಗುತ್ತದೆ. ಬಳಿಕ ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಹಸ ಪ್ರದರ್ಶನ ನಡೆಯಲಿದ್ದು, ಕಡೆಯಲ್ಲಿ ಲೇಸರ್ ಶೋ, ಪಂಜಿನ ಕವಾಯತು ನಡೆಯಲಿದೆ. ಈ ಕಾರ್ಯಕ್ರಮದೊಂದಿಗೆ 10 ದಿನಗಳ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ.