ನವದೆಹಲಿ: ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯು ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದ್ದು, ಬುಧವಾರ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಲಿದ್ದಾರೆ.
ಕಳೆದ ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಖನ್ನಾ ಮತ್ತು ಕೃಷ್ಣನ್ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಬುಧವಾರ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ ಮತ್ತು ಗುರುವಾರ ಕೆಪಿಸಿಸಿ ಪರ ವಕೀಲರಾದ ಕಪಿಲ್ ಸಿಬಲ್ ವಾದ ಮಂಡಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಲಿದ್ದಾರೆ.
ತ್ರಿಸದಸ್ಯ ಪೀಠ ಸೋಮವಾರದ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹಾಗೂ ಸ್ಪೀಕರ್ ಕಚೇರಿಗೆ ನೋಟಿಸ್ ನೀಡಿತ್ತು. ಈ ಪ್ರತಿವಾದಿಗಳು ಬುಧವಾರ ನೊಟೀಸಿಗೆ ಉತ್ತರ ನೀಡುವ ಸಾಧ್ಯತೆ ಇದೆ.
ಕಳೆದ ವಿಚಾರಣೆ ವೇಳೆ ವಾದ ಮಂಡಿಸಿದ್ದ ಮುಕುಲ್ ರೊಹ್ಟಗಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಮಧ್ಯಂತರ ಆದೇಶದ ಮೂಲಕ ಅನರ್ಹರ ಹಕ್ಕು ಮೊಟಕಾಗದಂತೆ ನೋಡಿಕೊಳ್ಳಬೇಕು. ಶಾಸಕರ ರಾಜೀನಾಮೆ ಸ್ವಯಂಪ್ರೇರಿತ ಹಾಗೂ ವೈಯಕ್ತಿಕ. ಆದರೆ, ಅಂದಿನ ಸ್ಪೀಕರ್ ಅದನ್ನು ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲಿಲ್ಲ. ಶಾಸಕರನ್ನು ಅನರ್ಹಗೊಳಿಸಿದ್ದೇ ಕಾನೂನು ಬಾಹಿರ. ಆತುರದ ನಿರ್ಧಾರ. ಅವರ ವಾದವನ್ನು ಕೇಳದೆ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ನೋಟಿಸ್ ನೀಡಿದ ಬಳಿಕ ಅದಕ್ಕೆ ಉತ್ತರಿಸಲು ಏಳು ದಿನ ಕಾಲಾವಕಾಶ ನೀಡಬೇಕು. ಆದರೆ ಹಿಂದಿನ ಸ್ಪೀಕರ್ ಕೇವಲ ಮೂರು ದಿನ ಅವಕಾಶ ನೀಡಿದ್ದರು. ಸ್ಪೀಕರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಂಡಾಯವೆದ್ದಿದ್ದ ಈ ಶಾಸಕರ ಮನವಿಯನ್ನು ಪುರಸ್ಕಾರ ಮಾಡಲಿಲ್ಲ. ಇದು ವಿಪ್ ಉಲ್ಲಂಘನೆಯ ಪ್ರಕರಣವಲ್ಲವೇ ಅಲ್ಲ ಎಂದು ವಕೀಲರು ವಾದಿಸಿದ್ದಾರೆ. ಅಲ್ಲದೆ, ಹಳೇ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಅದರಂತೆ ನಿರ್ಧಾರ ತೆಗೆದುಕೊಳ್ಳಿ ಎಂದೂ ಮನವಿ ಮಾಡಿದ್ದರು.
ಕೆಪಿಸಿಸಿ ಪರ ಕಪಿಲ್ ಸಿಬಲ್ ವಾದ ಮಾಡಿ ಈ ಪ್ರಕರಣದಲ್ಲಿ ಯಾವುದೇ ಮಧ್ಯಂತರ ಪರಿಹಾರವನ್ನೂ ಅನರ್ಹ ಶಾಸಕರಿಗೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು. ಕೇಂದ್ರ ಚುನಾವಣಾ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ 'ಅನರ್ಹ ಶಾಸಕರ ಸ್ಪರ್ಧೆಗೆ ಅಭ್ಯಂತರ ಇಲ್ಲ. ನಿಗದಿಯಾಗಿರುವ ಉಪ ಚುನಾವಣೆಯನ್ನು ಯಾವ ಕಾರಣಕ್ಕೂ ಮುಂದೂಡಬಾರದು. ಅನರ್ಹರನ್ನು ಸ್ಪರ್ಧೆಯಿಂದ ತಡೆಯುವ ಹಾಗಿಲ್ಲ. ಏಕೆ ತಡೆಯಬಾರದು ಎಂಬ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಲಿ' ಎಂದು ಹೇಳಿದ್ದರು. ಜೊತೆಗೆ ಕೇಂದ್ರ ಚುನಾವಣಾ ಆಯೋಗ ಪ್ರತಿವಾದಿಯಾಗಲು ಸಿದ್ದವಿದೆ ಎಂದಿದ್ದರು.