ಬೆಂಗಳೂರು: ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಂ.ಬಿ.ಪಾಟೀಲ್ ಅವರು, ನನಗೆ ಸಚಿವ ಸ್ಥಾನ ಬೇಡ, ಕೊಟ್ಟರೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಎಂಬ ಹೊಸ ಬೇಡಿಕೆ ಇಟ್ಟಿದ್ದಾರೆ.
ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡಿರುವ ತಮ್ಮ ಬೆಂಬಲಿಗ ಅತೃಪ್ತರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿದ್ದಾರೆ. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲೇ ಸಚಿವ ಸ್ಥಾನ ನೀಡಬೇಕಿತ್ತು. ಇದೀಗ ಎರಡನೇ ಹಂತ, ಮೂರನೇ ಹಂತದ ಸಚಿವ ಸ್ಥಾನ ಬೇಡವೇ ಬೇಡ, ಕೊಟ್ರೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಂದೆ ಬೇಡಿಕೆ ಇಟ್ಟಿದ್ದಾರೆ.
"ಕಾಂಗ್ರೆಸ್ ಪಕ್ಷ ನನ್ನನ್ನು ಕೈಬಿಟ್ಟಿದೆ. ಆದರೆ ಪಕ್ಷದಲ್ಲಿ ನಾನು ಏಕಾಂಗಿಯಲ್ಲ. ನನ್ನೊಂದಿಗೆ 15 ರಿಂದ 20 ಶಾಸಕರಿದ್ದಾರೆ. ಎಲ್ಲರೂ ಕೂಡಿ ಚರ್ಚಿಸುತ್ತೇವೆ. ನಾಳೆಯೇ ಸತೀಶ ಜಾರಕಿಹೊಳಿ, ಎಂಟಿಬಿ ನಾಗರಾಜ್, ಸುಧಾಕರ್ ಸೇರಿದಂತೆ ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಪಕ್ಷವನ್ನು ಬಿಡುವ ಪ್ರಶ್ನೆಯಿಲ್ಲ. ಪಕ್ಷದಲ್ಲಿಯೇ ಇದ್ದು ಪಕ್ಷವನ್ನು ಕಟ್ಟುವ ಬಗ್ಗೆ ಚರ್ಚೆ ಮಾಡುತ್ತೇವೆ" ಎಂದರು.