ಮುಂಬೈನಿಂದ ತಂಗಿಯ ಮಗನನ್ನೇ ಕರೆಸಿಲ್ಲ: ನಾರಾಯಣಗೌಡ

ಜಿಲ್ಲೆಗೆ ಮುಂಬೈನಿಂದ ಸಾವಿರಾರು ಜನ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅವರು ಈ ನೆಲದ ಜನ. ಅವರಿಗೆ ಇಲ್ಲಿ ಕ್ವಾರಂಟೈನ್ ಸೌಲಭ್ಯ ನೀಡೋದು ನಮ್ಮ ಕರ್ತವ್ಯ. 

Last Updated : May 21, 2020, 06:56 AM IST
ಮುಂಬೈನಿಂದ ತಂಗಿಯ ಮಗನನ್ನೇ ಕರೆಸಿಲ್ಲ: ನಾರಾಯಣಗೌಡ  title=
File Image

ಮಂಡ್ಯ: ಸಕ್ಕರೆಯ ನಾಡಿಗೆ ಕೊರೊನಾವೈರಸ್ (Coronavirus) ಹರಡಲು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರೇ ಕಾರಣ, ಅವರು ಮುಂಬೈನಿಂದ ಜನರನ್ನು ಕರೆಸಿದ್ದರಿಂದಲೇ ಮಂಡ್ಯದಲ್ಲಿ ಕೊರೊನಾ ಸೋಂಕು ಹುಟ್ಟಲು ಕಾರಣ ಎಂಬ ಆರೋಪಗಳಿಗೆ ತೋಟಗಾರಿಕಾ ಸಚಿವರೂ ಆದ ನಾರಾಯಣಗೌಡ (Narayana Gowda) ಸ್ಪಷ್ಟೀಕರಣ ನೀಡಿದ್ದಾರೆ. ಸ್ವತಃ ತಂಗಿಯ ಮಗನನ್ನೇ ಕರೆಸಿಲ್ಲ ಆದರೂ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಚುಂಚನಗಿರಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ಜನಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ, ಜಿಲ್ಲೆಗೆ ಮುಂಬೈನಿಂದ ಸಾವಿರಾರು ಜನ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅವರು ಈ ನೆಲದ ಜನ. ಅವರಿಗೆ ಇಲ್ಲಿ ಕ್ವಾರಂಟೈನ್ ಸೌಲಭ್ಯ ನೀಡೋದು ನಮ್ಮ ಕರ್ತವ್ಯ. ಆದ್ರೆ ನಾನು ಯಾರನ್ನೂ ಕರೆಸಿಲ್ಲ. ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ ಸೇವಾ ಸಿಂಧುವಿನಲ್ಲಿ  ಅರ್ಜಿಗಳನ್ನು ಹಾಕಿದ ಮುಂಬಯಿ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಶಿಕ್ಷಕರನ್ನು ಬಳಸಿಕೊಂಡು ಯಾರಾದರೂ ಹೊಸದಾಗಿ ಗ್ರಾಮಕ್ಕೆ ಬಂದರೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ನನ್ನ ಜನ್ಮ ಭೂಮಿ, ಈ ಭೂಮಿಯ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಇದೆ. ಬಂದವರೆಲ್ಲರಿಗೂ ಕ್ವಾರಂಟೈನ್ ಮಾಡಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಮುಂಬೈಯಿಂದ ಹಂತ ಹಂತವಾಗಿ ಬಿಡಲು ಮನವಿ ಮಾಡಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಇನ್ನೂ ಎರಡು ಸಾವಿರ ಜನಕ್ಕೆ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಕ್ವಾರಂಟೈನ್ (Quarantine) ಗೆ ಹಣದ ಕೊರತೆ ಇಲ್ಲ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಕ್ವಾರಂಟೈನ್ ಮಾಡೋದು ಸರಿಯಲ್ಲ. ಹಾಗಂತ ಜನ ಆತಂಕಗೊಳ್ಳೋದು ಬೇಡ. ಇನ್ನೂ ಎರಡು ಸಾವಿರ ಜನರಿಗೆ ಕ್ವಾರಂಟೈನ್ ಮಾಡುವ ಸಾಮರ್ಥ್ಯ ಇದೆ. ಕೋವಿಡ್ - 19 ವಿಚಾರದಲ್ಲಿ ಎಲ್ಲರೂ ಒಂದಾಗಿ ಹೋರಾಡಬೇಕು. ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಇದೇ ವೇಳೆ ಕೆಲ ಶಾಸಕರು ಮಂಡ್ಯದಲ್ಲಿ  ಲಾಕ್‌ಡೌನ್‌ (Lockdown)  ಮುಂದುವರೆಸುವ ಬಗ್ಗೆ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿಗಳು ಜೊತೆ ಚರ್ಚಿಸುವುದಾಗಿ ಸಚಿವ ನಾರಾಯಣಗೌಡ ಹೇಳಿದ್ದಾರೆ.

ನಿರ್ಮಲಾನಂದ ಶ್ರೀಗಳು ಮಾತನಾಡಿ, ಕೊರೊನಾ ವಿಚಾರದಲ್ಲಿ ಮುಂಜಾಗ್ರತೆ ಮುಖ್ಯ. ಅಧಿಕಾರಿಗಳು ಅವರ ಕಾರ್ಯ ಮಾಡಲಿ. ವೈಜ್ಞಾನಿಕವಾಗಿ ನಡೆಯಬೇಕಾ ಕೆಲಸಗಳು ನಡೆಯಲಿ. ಮುಂಬೈನಿಂದ ಬಂದವರಿಗೆ ನಿಯಮಾನುಸಾರ ರ್ಯಾಪಿಡ್ ಟೆಸ್ಟ್ ಮಾಡಿಸಿ. ಸೂಕ್ತ ಚಿಕಿತ್ಸೆ ನೀಡುವ ಕೆಲಸ ಕೂಡ ಆಗಲಿ. ಇತ್ತ ಮಠದ ವತಿಯಿಂದ ಅತಿರುದ್ರಯಾಗ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಮಂಡ್ಯ ಶಾಸಕ ಶ್ರೀನಿವಾಸ್, ನಾಗಮಂಗಲ ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಕೆ.ಟಿ. ಶ್ರೀಕಂಠೇಗೌಡ, ಜಿಲ್ಲೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
 

Trending News