ಬೆಂಗಳೂರು: ಮಹದಾಯಿ ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚಟುವಟಿಕೆಗೆ ಕಾರಣವಾಗಿದ್ದು, ಅತ್ತ ರೈತಪರ ಸಂಘಟನೆಗಳು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವಂತೆಯೇ ಇತ್ತ ಬಿಜೆಪಿ ರೈತ ಮೋರ್ಚಾ ಕೂಡ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದೆ.
ಉತ್ತರ ಕರ್ನಾಟಕದಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಒಕ್ಕೂಟಗಳು ಬಂದ್ ಆಚರಣೆ ಮಾಡುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ, ರೈತ ಮೋರ್ಚಾ ಸಂಘಟನೆಗಳು ಹಾಗೂ ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಅವರ ನೇತೃತ್ವದ ರೈತರು ಬಿಜೆಪಿ ಕಚೇರಿಯಿಂದ ರಾಜಭವನದತ್ತ ಪಾದಯಾತ್ರೆ ಹೊರಟಿದ್ದಾರೆ.
ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಹದಾಯಿ ರೈತರ ಜಾಥಾ ಮಲ್ಲೇಶ್ವರಂನಿಂದ ಚಾಲುಕ್ಯ ಸರ್ಕಲ್ ಮೂಲಕ ರಾಜಭವನಕ್ಕೆ ಹೊರಟಿದೆ. ಜಾಥಾದಲ್ಲಿ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ. ರಾಜಭವನ, ಚಾಲುಕ್ಯ ಸರ್ಕಲ್ ಮಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೇ. ಕೇವಲ ನಾಲ್ವರು ರುತ ಮುಖಂಡರಿಗೆ ಮಾತ್ರ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ಇನ್ನೂ ಕೆಪಿಸಿಸಿ ಕಚೇರಿ ಮುಂದಿನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಬೆಂಕಿ ಹಕ್ಚುವ ಕಾರ್ಯ ಮಾಡುತ್ತಿದೆ. ಕಳೆದ 30 ವರ್ಷಗಳಿಂದ ಮಹದಾಯಿ ವಿವಾದ ನಡೆಯುತ್ತಿದೆ. ಆದರೆ ಈವರೆಗೆ ಕಾಂಗ್ರೆಸ್ ಇದನ್ನು ಬಗೆಹರಿಸುವ ಪ್ರಯತ್ನ ನಡೆಸಿಲ್ಲ ಎಂದು ಅವರು ಆರೋಪಿಸಿದರು.
ಇಂದು ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಲಾಗುತ್ತಿದೆ. ಏನೇ ಆಗಲಿ, ನಾವು ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಿಸುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರ ಮನವೊಲಿಸಲು ಬಿಜೆಪಿ ಪ್ರಯತ್ನಿಸುತ್ತದೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮಹದಾಯಿ ವಿಚಾರದಲ್ಲಿ ರೈತರಿಗೆ ಬಿಜೆಪಿ ಕಚೇರಿ ಮುಂದೆ ಹೋರಾಟ ಮಾಡಲು ಹೇಳುವ ಮೂಲಕ ಕಾಂಗ್ರೆಸ್ ಕುತಂತ್ರ ನಡೆಸುತ್ತಿದೆ. ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡುರಾವ್ ಸೇರಿದಂತೆ ಇತರ ನಾಯಕರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಏತನ್ಮಧ್ಯೆ ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಗೆ ಕರೆ ಮಾಡಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮುಖಂಡ ರಿಜ್ವಾನ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಕಚೇರಿ ಬಳಿಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಮಹದಾಯಿ ವಿವಾದ ಸಂಬಂಧ ಪಕ್ಷದ ಯಾವುದೇ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡದಂತೆಯೂ ಸಿಎಂ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.