ಬೆಂಗಳೂರು : ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ರಚನೆಯಾಗಿರುವ ಮಹದಾಯಿ ನ್ಯಾಯಾಧಿಕರಣದ ಅವಧಿಯ ವಿಸ್ತರಣೆಗೆ ಒಪ್ಪಿಗೆ ನೀಡದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ
ಈ ಕುರಿತು ಗುರುವಾರ ವಿಧಾನಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಸಭಾ ನಾಯಕರ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂತಾರಾಜ್ಯ ನೀರಾವರಿ ವಿವಾದಗಳಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಬೇಡ ಎಂದು ಪ್ರತಿಪಕ್ಷಗಳ ಪ್ರಮುಖರೂ ಸಲಹೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾದವರ ವಾದವನ್ನು ಒಪ್ಪದಿರುವ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
2010ರ ನವೆಂಬರ್16 ರಂದು ಮಂಡಳಿ ರಚನೆಯಾಗಿದ್ದು ಅಂತಾರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ನ್ಯಾಯಮಂಡಳಿ ರಚನೆಯಾದ ಬಳಿಕ ಮೂರು ವರ್ಷದಲ್ಲಿ ವರದಿ ಸಲ್ಲಿಸಬೇಕು. ಜೊತೆಗೆ ನ್ಯಾಯಮಂಡಳಿಯ ಅವಧಿಯನ್ನು ಎರಡು ಬಾರಿ ವಿಸ್ತರಿಸಲು ಕಾಯಿದೆಯಲ್ಲಿ ಅವಕಾಶವಿದೆ. ಆದರೆ, ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಮತ್ತೊಮ್ಮೆ ವಿಸ್ತರಿಸಬೇಕು ಎಂದಾದರೆ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಇದು ಮತ್ತಷ್ಟುವಿಳಂಬಕ್ಕೆ ದಾರಿಯಾಗುತ್ತದೆ. ಜೊತೆಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಫೆಬ್ರವರಿ 6 ರಿಂದ ವಿವಾದದ ಕುರಿತು ಅಂತಿಮ ವಿಚಾರಣೆ ಆರಂಭವಾಗಿದ್ದು, ಫೆಬ್ರವರಿ 22ರ ವರೆಗೂ ವಿಚಾರಣೆ ನಡೆಯಲಿದೆ. ಈ ಸಂದರ್ಭ ಮೂರು ರಾಜ್ಯಗಳು ನ್ಯಾಯ ಮಂಡಳಿಯ ಮುಂದೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಆದರೆ, ಫೆ.6ರಂದು ನ್ಯಾಯಮಂಡಳಿಯಲ್ಲಿ ಗೋವಾ ಸರ್ಕಾರ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿದೆ.
ನ್ಯಾಧಿಕರಣಕ್ಕೆ ಮೂರೂ ರಾಜ್ಯಗಳು ಆಗಸ್ಟ್ 20ಕ್ಕೆ ವರದಿ ಕೊಡಬೇಕು. ಇದೀಗ ಮೂರೂ ರಾಜ್ಯಗಳು ತಮ್ಮ ತಮ್ಮ ಸಾಕ್ಷ್ಯ ಒದಗಿಸಿವೆæ. ಲಿಖಿತ ರೂಪದಲ್ಲಿ ತಮ್ಮ ವಾದ ಮಂಡನೆ ಮಾಡಿವೆæ. ನ್ಯಾಯಮಂಡಳಿ ಈ ತಿಂಗಳ 22ರವರೆಗೆ ವಾದ ಆಲಿಸಬೇಕು. ಆದರೆ, ಫೆ.6ರಂದು ನ್ಯಾಯಮಂಡಳಿಯಲ್ಲಿ ಗೋವಾ ಸರ್ಕಾರ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿದೆ. ಆದರೆ, ನಾವು ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆಗೆ ಒಪ್ಪಲು ಸಾಧ್ಯವಿಲ್ಲ. ಈ ವಿಷಯವನ್ನು ವಕೀಲರಿಗೂ ತಿಳಿಸಿದ್ದೇವೆ ಎಂದಿದ್ದಾರೆ.