ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕನಸು ಈಡೇರಲ್ಲ:ಸಿದ್ದರಾಮಯ್ಯ

ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಕನಸು ಈಡೇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.   

Last Updated : Apr 3, 2018, 07:44 PM IST
 ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕನಸು ಈಡೇರಲ್ಲ:ಸಿದ್ದರಾಮಯ್ಯ title=
Pic : Twitter/@@INCKarnataka

ಶಿವಮೊಗ್ಗ : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಖಂಡಿತಾ ಅಧಿಕಾರಕ್ಕೆ ಬರುವುದಿಲ್ಲ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಕನಸು ಈಡೇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 5ನೇ ಹಂತದ ಜನಾಶೀರ್ವಾದ ಯಾತ್ರೆ ಅಂಗವಾಗಿ ಇಂದು ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ಇಬ್ಬರೂ ಇವರಪ್ಪನಾಣೆಗೂ ಅಧಿಕಾರಕ್ಕೆ ಬರೋಲ್ಲ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸಿಎಂ ಆಗುವ ಕನಸು ಈಡೇರಲ್ಲ. ಜೆಡಿಎಸ್ ನವರು 25 ಶಾಸಕರು ಗೆದ್ದರೇ ಅದೇ ಸಾಧನೆ. ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್’ಗೆ ನೀಡುವ ಮತ ಬಿಜೆಪಿಗೆ ಕೊಟ್ಟಂತೆ. ಅವಕಾಶವಾದಿ ಜೆಡಿಎಸ್, ಕೋಮುವಾದಿ ಬಿಜೆಪಿ ದೂರವಿಟ್ಟು ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಹೇಳಿದರು. 

ಶಿವಮೊಗ್ಗ, ರಾಜ್ಯಕ್ಕೆ ಸಾಕಷ್ಟು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಅದರಲ್ಲಿ ಕಾಂಗ್ರೆಸ್'ನಿಂದ ಕಡದಾಳು ಮಂಜಪ್ಪ, ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರು. ಅಷ್ಟೇ ಏಕೆ? ಜೆ.ಹೆಚ್.ಪಟೇಲರಂತಹ ಉತ್ತಮ ಮುಖ್ಯಮಂತ್ರಿಯನ್ನೂ ಶಿವಮೊಗ್ಗ ನೀಡಿದೆ. ಇವರೆಲ್ಲರೂ ಉತ್ತಮ ಆಡಳಿತ ನಡೆಸಿದ್ದರು. ಜಿಲ್ಲೆಗೆ ಯಾವ ಕಳಂಕವನ್ನೂ ತಂದಿರಲಿಲ್ಲ. ಆದರೆ, ಇವರೆಲ್ಲರೂ ಉತ್ತಮ ಆಡಳಿತ ನಡೆಸಿ ಶಿವಮೊಗ್ಗ ಜಿಲ್ಲೆಗೆ ತಂದಿದ್ದ ಒಳ್ಳೆಯ ಹೆಸರನ್ನು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಜೈಲಿಗೆ ಹೋಗುವ ಮೂಲಕ ಒಂದೇ ಬಾರಿಗೆ ಕೆಟ್ಟ ಹೆಸರು ತಂದರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಏನೂ ಮಾಡಲಿಲ್ಲ. ಆದರೆ ನಾವು ಇಡೀ ರಾಜ್ಯ ವನ್ನು ಹಸಿವು ಮುಕ್ತವಾಗಿಸುವತ್ತ ದಿಟ್ಟ ಪ್ರಯತ್ನ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಕಳೆದ 5 ವರ್ಷಗಳ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ನುಡಿದಂತೆ ನಡೆದಿದೆ. ಆದರೆ, ಇದುವರೆಗೂ ನರೇಂದ್ರ ಮೋದಿ ಮತ್ತು ಅಮಿತ್ ಷಾ ಇರುವ ಬಿಜೆಪಿ ಪಕ್ಷ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಇಂದಿಗೂ ಶಿವಮೊಗ್ಗದಲ್ಲಿ ಬಿಜೆಪಿ ಮಾಡಿರುವ ಮಹಾನ್ ಕಾರ್ಯುವೆಂದರೆ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಇಡುವಂತಹ ಕೆಲಸವೇ ಹೊರತು ಮತ್ತೇನೂ ಅಲ್ಲ. ಬಿಜೆಪಿಗೆ ಅಧಿಕಾರ ಕೊಟ್ಟರೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಂತೆ ಆಗುತ್ತದೆ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ನಮ್ಮ ಜವಾಬ್ದಾರಿ ಹಾಗೂ ನಿಮ್ಮೆಲ್ಲರ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದರು. 

Trending News