ಬೆಂಗಳೂರು: ನವೀಕರಿಸಬಹುದಾದ ಮೂಲಗಳಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂಟರ್ ನ್ಯಾಷನಲ್ ಸೋಲಾರ್ ಅಲಯನ್ಸ್ ನ ಸದಸ್ಯ ರಾಷ್ಟ್ರಗಳ ರಾಯಭಾರಿಗಳೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯವು ನವೀಕರಿಸಬಹುದಾದ ಮೂಲಗಳಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗದೆ. ದಕ್ಷಿಣದ ರಾಜ್ಯಗಳಲ್ಲಿ ಸೋಲಾರ್ ನೀತಿ ರೂಪಿಸಿದ ಮೊದಲ ರಾಜ್ಯವೂ ನಮ್ಮದು ಎಂದು ಹೆಮ್ಮೆಯಿಂದ ನುಡಿದರು. ರಾಜ್ಯ ವಿದ್ಯುತ್ ಉತ್ಪಾದನಾ ವಲಯ ಹಾಗೂ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದರು.
ಈ ನೀತಿಯನ್ವಯ 2021ರ ವೇಳೆಗೆ 6 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೃಷ್ಟಿಯ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ನ ಮಹಾ ನಿರ್ದೇಶಕ ಉಪೇಂದ್ರ ತ್ರಿಪಾಠಿ ಮಾತನಾಡಿ, ಪ್ರಾಸ್ತಾವಿಕವಾಗಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಶಸ್ತಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸ್ವಾಗತಿಸಿದರು. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಈ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತಿತರ ಅಧಿಕಾರಿಗಳು, 40 ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು.