ರಾಜ್ಯದಲ್ಲಿ ಒಂದು ವಾರ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿಸಿ: ಡಿ.ಕೆ.ಶಿವಕುಮಾರ್

ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ಶಾಲೆ-ಕಾಲೇಜುಗಳನ್ನು ವಾರ ಕಾಲ ಮುಚ್ಚಿ, ಪರಿಸ್ಥಿತಿ ತಿಳಿಯಾಗಲು ಸಹಕರಿಸಬೇಕು‌. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು ಅಂತಾ ಡಿಕೆಶಿ ಹೇಳಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Feb 8, 2022, 03:42 PM IST
  • ನಮ್ಮ ದೇಶವನ್ನು ಇಡೀ ವಿಶ್ವವೇ ನೋಡುತ್ತಿದ್ದು, ಇಂತಹ ಗೊಂದಲ, ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ
  • ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕು, ಸಮಾಜದಲ್ಲಿ ಶಾಂತಿ ಕಾಪಾಡಲು ಕಠಿಣ ತೀರ್ಮಾನ ಕೈಗೊಳ್ಳಿ
  • ವಿದ್ಯಾರ್ಥಿಗಳ ಭವಿಷ್ಯ, ಉದ್ಯೋಗದ ಬಗ್ಗೆ ನಾವೆಲ್ಲರೂ ಗಮನಹರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ
ರಾಜ್ಯದಲ್ಲಿ ಒಂದು ವಾರ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿಸಿ: ಡಿ.ಕೆ.ಶಿವಕುಮಾರ್ title=
ಸಿಎಂ ಬಸವರಾಜ್ ಬೊಮ್ಮಾಯಿಗೆ ಡಿಕೆಶಿ ಮನವಿ

ಬೆಂಗಳೂರು: ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ(Hijab & Saffron Shawl Controversy) ತಾರಕಕ್ಕೇರಿದೆ. ಹೀಗಾಗಿ 1 ವಾರದ ಮಟ್ಟಿಗಾದರೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗಲಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರು ಈ ಕೂಡಲೇ ತಮ್ಮ ಅಧಿಕಾರಿಗಳಿಗೆ ಹೇಳಿ ಎಲ್ಲಾ ಶಾಲಾ-ಕಾಲೇಜುಗಳನ್ನು 1 ವಾರಗಳ ಕಾಲ ಮುಚ್ಚಿಸಿ, ಪರಿಸ್ಥಿತಿ ತಿಳಿಯಾಗುವವರೆಗೂ ಆನ್ಲೈನ್ ತರಗತಿಗಳನ್ನು ಮಾಡಿಸಬೇಕು. ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ಕಠಿಣ ತೀರ್ಮಾನ ಕೈಗೊಳ್ಳಿ. ನಮ್ಮ ದೇಶವನ್ನು ಇಡೀ ವಿಶ್ವವೇ ನೋಡುತ್ತಿದೆ. ಇಂತಹ ಗೊಂದಲ, ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಕೇವಲ ಅಲ್ಪಸಂಖ್ಯಾತರು ಕಾಣುತ್ತಿರುವುದು ದುರಂತ: ಬಿಜೆಪಿ

ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ಶಾಲೆ-ಕಾಲೇಜುಗಳನ್ನು ವಾರ ಕಾಲ ಮುಚ್ಚಿ, ಪರಿಸ್ಥಿತಿ(Karnataka Hijab Row) ತಿಳಿಯಾಗಲು ಸಹಕರಿಸಬೇಕು‌. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ನಮ್ಮ ಹಿರಿಯರು ಎಷ್ಟು ತ್ಯಾಗ ಬಲಿದಾನ ಮಾಡಿದ್ದಾರೆ ಎಂಬುದನ್ನು ನಾವು ನಮ್ಮ ಪಾಠಗಳಲ್ಲಿ ಓದಿ, ಕಲಿತಿದ್ದೇವೆ. ನಮ್ಮ ದೇಶದ ಐಕ್ಯತೆ ಸಮಗ್ರತೆಗೆ ನಮ್ಮ ಅನೇಕ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಸರ್ಕಾರ ರಚನೆಯಾದ ಮೇಲೆ ಸಂವಿಧಾನ ನೀಡಿದೆ. ಸಂವಿಧಾನ ಹಾಗೂ ರಾಷ್ಟ್ರ ಧ್ವಜ ನಮ್ಮ ಧರ್ಮ ಅಂತಾ ಡಿಕೆಶಿ(DK shivakumar)ಹೇಳಿದ್ದಾರೆ.

ಇಂದು ಒಂದು ಕಾಲೇಜಿನಲ್ಲಿ ನಮ್ಮ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ(Saffron Flag) ಹಾರಿಸುತ್ತಿದ್ದಾರೆ ಎಂದರೆ ಈ ರಾಜ್ಯದಲ್ಲಿ ಏನಾಗುತ್ತಿದೆ, ದೇಶ ಎತ್ತ ಸಾಗುತ್ತಿದೆ ಎಂದು ವಿಶ್ವದೆಲ್ಲೆಡೆ ಇರುವ ಭಾರತೀಯರು, ಕನ್ನಡಿಗರು ಆಘಾತದಿಂದ ನೋಡುತ್ತಿದ್ದಾರೆ. ವಿಶ್ವದ ಪ್ರತಿಷ್ಠಿತ 500 ಕಂಪನಿಗಳಲ್ಲಿ ನಮ್ಮ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ವಿಶ್ವದ ಅನೇಕ ಕಡೆಗಳಲ್ಲಿ ಖ್ಯಾತ ವೈದ್ಯರು, ಇಂಜಿನಿಯರ್ ಗಳಾಗಿದ್ದಾರೆ. ನಮ್ಮಲ್ಲಿ ಉತ್ತಮ ಶಿಕ್ಷಣ ಪಡೆದ ಶೇ.11ರಷ್ಟು ವಿದ್ಯಾವಂತರನ್ನು ಹೊರದೇಶಗಳು ಕೆಲಸಕ್ಕೆ ತೆಗೆದುಕೊಂಡು ಅವರ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಕೆಳಗೆ ಇಳಿಯುತ್ತಿದೆ ಎಂದರೆ ಮನಸ್ಸಿಗೆ ಬಹಳ ನೋವಾಗುತ್ತಿದೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Basavaraj Bommai: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,030 ಕೋಟಿ ರೂ. ಅನುದಾನಕ್ಕೆ ಮನವಿ

ವಿದ್ಯಾರ್ಥಿಗಳ ಭವಿಷ್ಯ, ಉದ್ಯೋಗದ ಬಗ್ಗೆ ನಾವೆಲ್ಲರೂ ಗಮನಹರಿಸಬೇಕು. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ, ಉತ್ತಮ ಬದುಕು ಕಟ್ಟಿಕೊಡುವ ವಿಚಾರದಲ್ಲಿ ಅನೇಕ ಕನಸುಗಳನ್ನು ಕಾಣುತ್ತಿದ್ದಾರೆ. ಆದರೆ ಇಂತಹ ಘಟನೆಗಳು ಆ ಕನಸಿಗೆ ತಣ್ಣೀರೆರೆಚುತ್ತಿವೆ. ನಮ್ಮ ಧರ್ಮ ಸಂವಿಧಾನ. ನಮ್ಮ ವ್ಯಕ್ತಿಗತ ಆಚರಣೆಗಳನ್ನು ಏನಿದ್ದರೂ ಮನೆಯಲ್ಲಿ ಇಟ್ಟುಕೊಳ್ಳೋಣ. ಕಾಲೇಜಿನಲ್ಲಿ ಮೊದಲಿನಿಂದಲೂ ಏನೇನು ಆಚಾರ ನಡೆದುಕೊಂಡು ಬಂದಿದೆಯೋ ಅದನ್ನು ಪಾಲಿಸಿಕೊಂಡು ಹೋಗೋಣ. ಹೊಸದಾಗಿ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ರಾಹುಲ್ ಗಾಂಧಿ(Rahul Gandhi) ಅವರು ಹೇಳಿದಂತೆ ಎಲ್ಲ ಧರ್ಮದವರಿಗೂ ಗೌರವ ಸಿಗಬೇಕು’ ಅಂತಾ ಡಿಕೆಶಿ ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News