ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ

ಐಸಿಸ್‌ ಜೊತೆ ನಂಟು ಹೊಂದಿರುವ ಕಾರಣ, ರಾಜ್ಯದ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೇಂದ್ರ ತನಿಖಾ ದಳವು ಉಗ್ರರನ್ನು ಬಂಧಿಸುತ್ತಿದೆ. ಇಷ್ಟು ವರ್ಷ ಶಾಂತಿಯ ನೆಲೆಬೀಡಾಗಿದ್ದ ಕರ್ನಾಟಕ, ದಿಢೀರ್ ಅಂತಾ ಉಗ್ರರ ವಾಸಸ್ಥಾನವಾಗಿ ಬದಲಾಗಲು ಕಾಂಗ್ರೆಸ್‌ ಸರ್ಕಾರವೇ ಕಾರಣವೆಂದು ಬಿಜೆಪಿ ಆರೋಪಿಸಿದೆ.

Written by - Puttaraj K Alur | Last Updated : Oct 3, 2023, 05:36 PM IST
  • ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದೆ
  • ಪೊಲೀಸರನ್ನು ಕಂಡರೂ ಭಯವಿಲ್ಲದೆ ರಾಜಾರೋಷವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ
  • "ಕೈ" ಸರ್ಕಾರ ಜಿಹಾದಿಗಳ ಗುಲಾಮರಂತೆ ವರ್ತಿಸುತ್ತಿರುವುದು 6 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾಮೋಸ
ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ title=
ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದೆ!

ಬೆಂಗಳೂರು: ತೈಲಪ ಹೊಯ್ಸಳರಾಳಿದ ನಾಡು, ಡಂಕಣ ಜಕಣರ ನೆಚ್ಚಿನ ಬೀಡಾಗಿದ್ದ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದ್ದು, ಮಲಗಿದ್ದ ಸ್ಲೀಪರ್‌ ಸೆಲ್‌ಗಳೆಲ್ಲಾ ಎದ್ದು ನಿಂತಿವೆ. ಈ ನೆಲದ ಕಾನೂನಿಗೂ ಗೌರವ ನೀಡದೆ, ಪೊಲೀಸರನ್ನು ಕಂಡರೂ ಭಯವಿಲ್ಲದೆ ರಾಜಾರೋಷವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದೆ.

‘ಆದರೆ ಇವುಗಳಿಗೆ ಕಡಿವಾಣ ಹಾಕಬೇಕಿದ್ದ "ಕೈ" ಸರ್ಕಾರ ಜಿಹಾದಿಗಳ ಗುಲಾಮರಂತೆ ವರ್ತಿಸುತ್ತಿರುವುದು ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾಮೋಸ.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಲ ಮುದುರಿಕೊಂಡು ಕೂತಿದ್ದ ಜಿಹಾದಿ ಶಕ್ತಿಗಳು, ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂಬ ಕಾರಣಕ್ಕೆ ಸಂಪೂರ್ಣ ಬಾಲ ಬಿಚ್ಚಿದ್ದು, ರಾಜ್ಯಾದ್ಯಂತ ಶಾಂತಿ ಕದಡುವ ಕೆಲಸಗಳನ್ನು ಈ ನಾಲ್ಕು ತಿಂಗಳಿನಿಂದ ಮಾಡುತ್ತಲೇ ಬಂದಿವೆ. ರಾಮನಗರದಲ್ಲಿ ತಮ್ಮವರೇ ಶಾಸಕರು, ತಮ್ಮವರೇ ಸಚಿವರು ಎಂಬ ಕಾರಣಕ್ಕೆ ಜಿಹಾದಿಗಳ ಅಟ್ಟಹಾಸ ವ್ಯಾಪಕವಾಗಿದ್ದು, ಹಾಡುಹಗಲೇ ಹಿಂದೂಗಳ ಮನೆ ಮುಂದಿರುವ ಗೋವುಗಳನ್ನು ಕದ್ದು, ವಧಿಸಿ, ಗೋ ಮಾಂಸದ ತ್ಯಾಜ್ಯವನ್ನು ಹಿಂದೂಗಳ ಜಮೀನಿನಲ್ಲಿಯೇ ಸುರಿಯುವಷ್ಟು ದಾರ್ಷ್ಟ್ಯತನ ಪ್ರದರ್ಶಿಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

‘ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್‌ ನೀಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ, ಅಲ್ಲಿನ ಜನರಿಂದ ಗುಂಪು ಹಲ್ಲೆ ನಡೆಸಿರುವುದೂ ಸರ್ಕಾರ ತಮ್ಮ ಬೆನ್ನಿಗಿದೆ ಎಂಬ ಕಾರಣಕ್ಕೇ. ಹಾಸನದಲ್ಲಿ ಹಾಡುಹಗಲೇ ಜಿಹಾದಿ ಯುವಕರು ಗನ್‌ ಹಿಡಿದುಕೊಂಡು ಸಾರ್ವಜನಿಕರನ್ನು  ಬೆದರಿಸಿದ್ದಾರೆ. ಭದ್ರಾವತಿಯಲ್ಲಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜಿಹಾದಿ ಸಂಘಟನೆಗಳಿಂದ ಸಕಾರಣವಿಲ್ಲದೇ ಹಿಂದೂ ಯುವಕರ ಮೇಲೆ ನೈತಿಕ ಪೊಲೀಸ್‌ಗಿರಿ ನಡೆದಿದೆ. ಇದೆಲ್ಲಕ್ಕಿಂತಲೂ ಅಮಾನವೀಯ ಎಂಬಂತೆ ಉಡುಪಿಯ ಕಾಲೇಜಿನಲ್ಲಿ ಹಿಂದೂ ಯುವತಿಯರ ವಿಡಿಯೋಗಳನ್ನು, ಜಿಹಾದಿ ಶಕ್ತಿಗಳು ರಹಸ್ಯವಾಗಿ ಚಿತ್ರೀಕರಿಸಿ, ಹಿಂದೂ ಯುವತಿಯರ ಮಾನಹರಣ ಮಾಡುತ್ತಿವೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರ ಪದೇ ಪದೆ ಪಕ್ಷ ವಿಸರ್ಜನೆ ಘೋಷಿಸಿದರೆ ಕಾರ್ಯಕರತರು ಎಲ್ಲಿ ಹೋಗಬೇಕು?: ಡಿ.ಕೆ.ಶಿವಕುಮಾರ್

‘ಐಸಿಸ್‌ ಜೊತೆ ನಂಟು ಹೊಂದಿರುವ ಕಾರಣ, ರಾಜ್ಯದ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೇಂದ್ರ ತನಿಖಾ ದಳವು ಉಗ್ರರನ್ನು ಬಂಧಿಸುತ್ತಿದೆ. ಇಷ್ಟು ವರ್ಷ ಶಾಂತಿಯ ನೆಲೆಬೀಡಾಗಿದ್ದ ಕರ್ನಾಟಕ, ದಿಢೀರ್ ಅಂತಾ ಉಗ್ರರ ವಾಸಸ್ಥಾನವಾಗಿ ಬದಲಾಗಲು ಕಾಂಗ್ರೆಸ್‌ ಸರ್ಕಾರವೇ ಕಾರಣ. ಹಿಂದೂಗಳಿಗೆ ಚೌತಿ ಸಮಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ನೂರೆಂಟು ಕಂಡಿಷನ್‌ಗಳು ವಿಧಿಸುವ, ಬಾಂಡ್‌ಗಳನ್ನು ಕೇಳುವ ಕಾಂಗ್ರೆಸ್‌ ಸರ್ಕಾರ, ಶಿವಮೊಗ್ಗ ಮತ್ತು ಕೋಲಾರದಲ್ಲಿ ದ್ವೇಷಪೂರಿತ ಬರಹಗಳನ್ನು ಹೊಂದಿರುವ ತಲ್ವಾರ್‌ ಮಾದರಿಯ ಕಮಾನ್‌ಗಳು, ಟಿಪ್ಪು, ಔರಂಗಜೇಬನಂತಹ ಹಿಂದೂ ವಿರೋಧಿಗಳ ಕಟೌಟ್‌ಗಳನ್ನು ನಿರ್ಮಿಸಲು ಬೇಷರತ್‌ ಅನುಮತಿ ನೀಡುತ್ತದೆ. ಇದು ಸಿದ್ದರಾಮಯ್ಯರ ಸರ್ಕಾರದ ಹಿಂದೂ ವಿರೋಧಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ’ ಎಂದು ಬಿಜೆಪಿ ಟೀಕಿಸಿದೆ.

‘ಅಸಲಿಗೆ ಜಿಹಾದಿಗಳಿಗೆ ಈ ಪರಿ ಕಾನೂನನ್ನು ಕೈಗೆತ್ತಿಕೊಳ್ಳುವ “ಶಕ್ತಿ” ಒದಗಿಸಿದ್ದೇ ಕಾಂಗ್ರೆಸ್‌ ಸರ್ಕಾರ. ಜಿಹಾದಿಗಳು ಎಂತಹ ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದರೂ, ಅವರಿಗೆ ಅಮಾಯಕ ಎಂಬ ಪಟ್ಟ ಕಟ್ಟಲು ಕಾಂಗ್ರೆಸ್‌ ಸರ್ಕಾರದ ಸಚಿವರೊಳಗೇ ಪೈಪೋಟಿ ಆರಂಭವಾಗುತ್ತದೆ. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿ ಸಿಕ್ಕಿಬಿದ್ದ ಭಯೋತ್ಪಾದಕರಿಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ದೆ ಆರ್‌ ಮೈ ಬ್ರದರ್ಸ್”‌ ಎನ್ನುತ್ತಾರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಂತೂ ಉಗ್ರರಿಗೆ ಅಮಾಯಕರು ಎಂಬ ಸರ್ಟಿಫಿಕೇಟ್‌ ನೀಡುವ ಏಜನ್ಸಿ ನಡೆಸುತ್ತಿರುವಂತೆ ವರ್ತಿಸುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

‘ಸಿಎಂ ಸಿದ್ದರಾಮಯ್ಯರವರಂತೂ ಜಿಹಾದಿ ಶಕ್ತಿಗಳನ್ನು ಪೋಷಿಸುವ ಸಲುವಾಗಿ ₹10,000 ಕೋಟಿ ಅನುದಾನ ನೀಡುತ್ತೇವೆಂದು ಘೋಷಿಸುವುದು ಮಾತ್ರವಲ್ಲದೆ, ಕಾಂಗ್ರೆಸ್‌ ಸರ್ಕಾರ ಜಿಹಾದಿಗಳ ಋಣದಲ್ಲಿದೆ ಎಂಬುದನ್ನು ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರ ಹೇಳಿಕೆ, ನಡವಳಿಕೆ ಮತ್ತು ಅತಿಯಾದ ತುಷ್ಟೀಕರಣದ ಆಡಳಿತವನ್ನು ಗಮನಿಸಿದರೆ, ಕಾಂಗ್ರೆಸ್‌ ಕರ್ನಾಟಕವನ್ನು ತಾಲಿಬಾನ್‌ ಮಾಡುವ ಗುಪ್ತಕಾರ್ಯಸೂಚಿಯನ್ನು ಹೊಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ವೋಟಿಗಾಗಿ ಏನನ್ನು ಬೇಕಾದರೂ ಮಾಡಲು ಹೇಸದ ಕಾಂಗ್ರೆಸ್‌, ರಾಜ್ಯದಲ್ಲಿನ ಹಿಂದೂಗಳನ್ನು ಒಕ್ಕಲೆಬ್ಬಿಸುವುದಕ್ಕೂ ಹಿಂದುಮುಂದು ನೋಡುವುದಿಲ್ಲ. ಕರ್ನಾಟಕದ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ತಾಲಿಬಾನ್ ಆಗುವುದು ಖಚಿತ-ನಿಶ್ಚಿತ!!’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲಿ : ಡಿಸಿಎಂ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News