ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮ; ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರ ಸೂಚನೆ

ರಾಜಕಾಲುವೆ ಜಾಗವನ್ನು ಎಂಥ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದರೂ ಸಹ ಮುಲಾಜಿಲ್ಲದೇ ತೆರವು ಮಾಡಲಾಗುತ್ತದೆ- ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ  

Last Updated : Apr 25, 2019, 07:33 AM IST
ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮ; ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರ ಸೂಚನೆ title=
Pic Courtesy: Twitter@DrParameshwara

ಬೆಂಗಳೂರು: ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ನೀರು ನಿಲ್ಲದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಕೊಠಡಿ ಸಮಿತಿಯಲ್ಲಿ ಬುಧವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ, ಪ್ರತಿ ವರ್ಷ ಮಳೆಗಾಲದಲ್ಲಿ ತಗ್ಗು ಪ್ರದೇಶ, ರಾಜಕಾಲುವೆ, ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಿತಿ ಇದೆ. ಕಳೆದ ವರ್ಷ ನಿರೀಕ್ಷೆಗೂ ಹೆಚ್ಚು ಮಳೆಯಾದ್ದರಿಂದ ನಗರವಾಸಿಗಳು ತೊಂದರೆ ಅನುಭವಿಸಿದ್ದರು. ಆದರೆ ಈ ವರ್ಷ ಮಳೆಗಾಲಕ್ಕೂ ಮುನ್ನವೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು.

ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ:
ನಗರದಲ್ಲಿ ಒಟ್ಟು 246 ತಗ್ಗು ಪ್ರದೇಶ ಗುರುತಿಸಲಾಗಿದೆ. ಇಲ್ಲಿ‌ ಮಳೆಯಾದ ಕೂಡಲೇ ನೀರು‌ ಮನೆಗಳಿಗೆ ನುಗ್ಗುವ ಪರಿಸ್ಥಿತಿ ಇದ್ದು, ಇಲ್ಲಿ ನೀರು ನಿಲ್ಲದಂತೆ ತಾಂತ್ರಿಕವಾಗಿ ಕ್ರಮ ವಹಿಸಲಾಗಿದೆ. ಜೊತೆಗೆ ಚರಂಡಿಗಳಲ್ಲಿ ಕಸ ನಿಲ್ಲದೇ ನೀರು ಸರಾಗವಾಗಿ ಹರಿಯುವಂತೆ ಈಗಾಗಲೇ ಸ್ವಚ್ಛತಾ ಕೆಲಸ ನಡೆಸಲಾಗಿದೆ ಎಂದರು.

ಒತ್ತುವರಿ ಮಾಡಿಕೊಂಡ ರಾಜಕಾಲುವೆ ಜಾಗವನ್ನು ತೆರವು ಮಾಡುವ ಕೆಲಸ ನಡೆಯುತ್ತಿದೆ. ಪ್ರತಿ ಜೋನ್‌ನಲ್ಲೂ ಮ್ಯಾಪಿಂಗ್ ಮಾಡಲಾಗಿದೆ. ಅದರಲ್ಲೂ ಒತ್ತುವರಿಗೊಂಡು ನೀರು ನಿಲ್ಲುವಂಥ ಪ್ರದೇಶಗಳನ್ನು ಆದ್ಯತೆ ಮೇರೆಗೆ ತೆರವು ಮಾಡಲಾಗುತ್ತಿದೆ. ಆ ಕೆಲಸ ಕೂಡ ನಡೆಯುತ್ತಿದೆ. ನಗರದಲ್ಲಿ ಒಟ್ಟು 840 ಕಿ.ಮೀ ಕಾಲುವೆ ಇದ್ದು, 400 ಕಿ.ಮೀ ಉದ್ದ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛ ಹಾಗೂ ಹೂಳು ಎತ್ತುವ ಮಾಡಲಾಗಿದೆ.‌ ಜೊತೆಗೆ ತಡೆಗೋಡೆ ಕೂಡ ನಿರ್ಮಿಸಲಾಗಿದೆ.  ಉಳಿದ 440 ಕಿ.ಮೀ. ಕೆಲಸ ಪ್ರಗತಿಯಲ್ಲಿದೆ ಎಂದು ಪರಮೇಶ್ವರ ಮಾಹಿತಿ ನೀಡಿದರು.

ರಾಜಕಾಲುವೆ ಜಾಗವನ್ನು ಎಂಥ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದರೂ ಸಹ ಮುಲಾಜಿಲ್ಲದೇ ತೆರವು:
ರಾಜಕಾಲುವೆ ಮಾರ್ಗದಲ್ಲಿ ಒಟ್ಟು 1950 ಕಿ.ಮೀ. ಒತ್ತುವರಿಯನ್ನು ಗುರುತಿಸಿದ್ದು, ಈ ವರ್ಷ 450 ಕಿ.ಮೀ. ತೆರವು ಮಾಡಲಾಗಿದೆ. ಚುನಾವಣೆ ಇದ್ದ ಕಾರಣ ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ತೆರವು ಕಾರ್ಯ ಪ್ರಾರಂಭವಾಗಲಿದೆ. ಒತ್ತುವರಿಯಾದ ಸ್ಥಳ ಗುರುತಿಸಲೆಂದೇ, 4 ಸರ್ವೆ ಮಾಡುವವರನ್ನು ಖಾಯಂ ಆಗಿ ನೇಮಿಸಿಕೊಂಡಿದ್ದೇವೆ. ರಾಜಕಾಲುವೆ ಜಾಗವನ್ನು ಎಂಥ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದರೂ ಸಹ ಮುಲಾಜಿಲ್ಲದೇ ತೆರವು ಮಾಡಲಾಗುತ್ತದೆ ಎಂದು ಹೇಳಿದರು.

ತಗ್ಗು ಪ್ರದೇಶದಲ್ಲಿ ಅಥವಾ ರಸ್ತೆಗಳಲ್ಲಿ ನೀರು ತುಂಬಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಆದಾಗ್ಯು ಒಂದುವೇಳೆ ನೀರು ತುಂಬಿಕೊಂಡರೆ ಕೂಡಲೇ ಬಿಬಿಎಂಪಿ ತಂಡ ಪಂಪ್‌ ಮಿಷನರಿಗಳಿಂದ ನೀರನ್ನು ತೆರವು ಮಾಡಲಾಗುತ್ತದೆ. ಇದಕ್ಕಾಗಿ 8 ವಿಭಾಗದಲ್ಲೂ ತಂಡ ರಚಿಸಲಾಗಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಪರಿಸ್ಥಿತಿ ನಿರ್ವಹಣೆಗೆ  8 ವಿಭಾಗ ಹಾಗೂ 63 ಉಪವಿಭಾಗದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇಂದ್ರ ವಿಭಾಗದಲ್ಲಿ ಅಧಿಕಾರಿಗಳು ಮೂರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಉಪವಿಭಾಗದಲ್ಲಿನ ಅಧಿಕಾರಿಗಳು ದಿನದ 24 ಗಂಟೆ ಸಹ ಕೆಲಸ ಮಾಡುವಂತೆ ಸೂಚಿಸಿದ್ದೇನೆ.  ಮರಗಳು ಬೀಳದಂತೆ ಈಗಿಂದಲೇ ಒಣ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳ ಪರಿಶೀಲನೆ ಮಾಡಲು 21 ತಂಡ ಕೆಲಸ ಮಾಡುತ್ತಿದೆ. ರಸ್ತೆಗುಂಡಿ ಮುಚ್ಚಲು ಪ್ರತಿ ಜೋನ್ ಚೀಫ್ ಇಂಜಿಯರ್‌ಗೆ ಸೂಚನೆ ನೀಡಲಾಗಿದೆ.

ಕಸ ವಿಲೇವಾರಿ, ಸಂಸ್ಕರಣೆ ಸಂಬಂದ ಇನ್ನು 15 ದಿನದೊಳಗೆ ಹೊಸದಾಗಿ ಗ್ಲೋಬಲ್‌ ಟೆಂಡರ್‌ ತೆರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗ ಇರುವ ಟೆಂಡರ್‌ದಾರರು ಸೂಕ್ತ ರೀತಿಯಲ್ಲಿ ಕೆಲಸ ಮಾಡದ ಕಾರಣ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಟೆಂಡರ್‌ ಅನಿವಾರ್ಯ ಎಂದು ಹೇಳಿದರು.
 

Trending News