ಧ್ವನಿ ಇಲ್ಲದವರಿಗೆ ಧ್ವನಿ ಕೊಡುವುದೇ ಪತ್ರಿಕಾ ವೃತ್ತಿಯ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಇನ್ನೂ ಶೇ. 25 ರಷ್ಟು ಮಂದಿಗೆ ಶಿಕ್ಷಣ ಸಿಕ್ಕಿಲ್ಲ. ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ, ಸಮಾಜದ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ.

Written by - Yashaswini V | Last Updated : Jul 24, 2023, 02:03 PM IST
  • ಸಮಾಜದಲ್ಲಿ ಅವಕಾಶ ವಂಚಿತರು ಮತ್ತು ಧ್ವನಿ ಇಲ್ಲದವರನ್ನು ಮುಖ್ಯವಾಹಿನಿಗೆ ತರುವ ನನ್ನ ಪ್ರಯತ್ನ ನಿರಂತರ
  • ಧ್ವನಿ ಇಲ್ಲದವರಿಗೆ ಧ್ವನಿ ಕೊಡುವುದೇ ಪತ್ರಿಕಾ ವೃತ್ತಿಯ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಧ್ವನಿ ಇಲ್ಲದವರಿಗೆ ಧ್ವನಿ ಕೊಡುವುದೇ ಪತ್ರಿಕಾ ವೃತ್ತಿಯ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ  title=

CM Siddaramaiah: ಮಹಾತ್ಮಗಾಂಧಿ, ಅಂಬೇಡ್ಕರ್ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ, ಆಶಯ, ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವತ್ತಿನ ಬಹಳಷ್ಟು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವುದು ನನ್ನ ಭಾವನೆ. ಪತ್ರಿಕಾ ವೃತ್ತಿಯ ಆಶಯಕ್ಕೆ ತಕ್ಕಂತೆ ಇದ್ದೇವಾ, ಇಲ್ಲವಾ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದರು. 

ಸಮಾಜದಲ್ಲಿ ಇನ್ನೂ ಶೇ. 25 ರಷ್ಟು ಮಂದಿಗೆ ಶಿಕ್ಷಣ ಸಿಕ್ಕಿಲ್ಲ. ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ, ಸಮಾಜದ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ. 

ಇದನ್ನೂ ಓದಿ- ಕಾಡು ಹಂದಿಗಳ ದಾಳಿಗೆ ಎಕರೆ ಕಬ್ಬು ಸರ್ವನಾಶ: ಕಂಗಾಲಾದ ರೈತ

ಸಾಮಾಜಿಕ ಅಸಮಾನತೆ ಹಿಂದಿನಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಹೀಗಾಗಿ ಸಮಾಜದ ಬಹುಪಾಲು ಮಂದಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯಕ್ಕೆ ಬಲಿಯಾಗಿದ್ದಾರೆ. 

ಇದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಅನುಷ್ಠಾನಗೊಳ್ಳುವ ಹಿಂದಿನ ದಿನ ತಾವು ಮಾಡಿದ ಐತಿಹಾಸಿಕ ಭಾಷಣದಲ್ಲಿ, "ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಸಿಗದೆ ಕೇವಲ ದೇಶಕ್ಕೆ ಆಡಳಿತಾತ್ಮಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಅಸಮಾನತೆಗೆ ಬಲಿಯಾದ ಜನ ಮುಂದೊಂದು ದಿನ ಈ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡಿಬಿಡಬಹುದು" ಎಂದಿದ್ದರು. 

ದುಡಿಯುವ ವರ್ಗಗಳು ಹಸಿವಿನಿಂದ ಮಲಗಿದರೂ ಪರ್ವಾಗಿಲ್ಲ, ಅನ್ನಭಾಗ್ಯ ಮಾತ್ರ ಜಾರಿ ಮಾಡಬಾರದು ಎನ್ನುವ ಹೊಟ್ಟೆ ತುಂಬಿದವರ ಮನಸ್ಥಿತಿ ಸಮಾಜ ವಿರೋಧಿಯಾದದ್ದು ಎಂದು ಸಿಎಂ ಹೇಳಿದರು. 

ಇದನ್ನೂ ಓದಿ- ಸರ್ಕಾರ ಬೀಳಿಸುವ ಪಿತೂರಿ ಬಗ್ಗೆ ಮಾಹಿತಿ ಇದೆ: ಡಿಸಿಎಂ ಡಿಕೆ ಶಿವಕುಮಾರ್

ಜನರ ಜೇಬಿನಲ್ಲಿ ಹಣ ಇದ್ದರೆ ಮಾತ್ರ ದೇಶದ ಆರ್ಥಿಕತೆ ಬೆಳವಣಿಗೆ ಕಾಣುತ್ತದೆ. ಈ ಕಾರಣಕ್ಕೇ ನಮ್ಮ ಸರ್ಕಾರ ದುಡಿಯುವ ಜನರ ಜೇಬಿನಲ್ಲಿ ಹಣ ಇರುವ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯವರ ಮನಸ್ಥಿತಿ ಸಮಾಜ ವಿರೋಧಿಯಾದದ್ದು. ಹೀಗಾಗಿ ಪತ್ರಿಕಾ ವೃತ್ತಿಯಲ್ಲಿರುವವರು ಬಡವರ ಪರವಾದ, ಜನರ ಪರವಾದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು. 

ಹಿರಿಯ ಪತ್ರಕರ್ತೆ  ಡಾ.ಆರ್.ಪೂರ್ಣಿಮಾ ಅವರು ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್,  ಹಿರಿಯ ಪತ್ರಕರ್ತರು ಹಾಗೂ ಈ-ದಿನ‌ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಡಿ.ಉಮಾಪತಿ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ವಾರ್ತಾ ಇಲಾಖೆ ಆಯುಕ್ತರಾದ ಡಾ.ಹೇಮಂತ್ ಎಂ ನಿಂಬಾಳ್ಕರ್ ಉಪಸ್ಥಿತರಿದ್ದರು. 15 ಕ್ಕೂ ಹೆಚ್ಚು ಮಂದಿ ಹಿರಿಯ ಪತ್ರಕರ್ತರು ಮತ್ತು ಛಾಯಾಗ್ರಾಹಕರುಗಳನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. 

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಸೇರಿ ಪದಾಧಿಕಾರಿಗಳು ಕಾರ್ಯಕ್ರಮ ನಡೆಸಿಕೊಟ್ಟರು. 

ಸುಳ್ಳು ಬರೆದವರನ್ನೂ ನಾನು ಕೇಳಲ್ಲ! 
ಇವತ್ತು ಮಾಧ್ಯಮಗಳಲ್ಲಿ  ಸತ್ಯ ನ್ಯಾಯ ಸಿಗತ್ತೆ ಎನ್ನುವ ಪರಿಸ್ಥಿತಿ ಈಗ ಇಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿ ಬರೆದರೂ ನಾನು ಯಾಕಪ್ಪಾ ಸುಳ್ಳು ಬರಿತೀಯ ಅಂತ ಕೇಳಲ್ಲ. ಜನ ಸಾಮಾನ್ಯರು ಇತರೆ ಮೂಲಗಳಿಂದ ಸತ್ಯ ತಿಳಿದುಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News