ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ- ಸುಧಾಮೂರ್ತಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿದರು.

Last Updated : Oct 10, 2018, 10:03 AM IST
ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ- ಸುಧಾಮೂರ್ತಿ title=

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇಂದು ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ  ಚಾಮುಂಡಿ ದೇವಿಗೆ ಅಗ್ರಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಸಂಸ್ಕೃತಿ ಖಾತೆ ಸಚಿವೆ ಜಯಮಾಲಾ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ ಸಿಂಹ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆನಂತರ ಮಾತನಾಡಿದ ಸುಧಾಮೂರ್ತಿಯವರು, ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ತಮ್ಮ ಸಂತಸ ಹಂಚಿಕೊಂಡರು. ನಮ್ಮ ಕಾಲದಲ್ಲಿ ದಸರಾವನ್ನು ಅಜ್ಜಿ 'ಮಹಾನವಮಿ ಹಬ್ಬ' ಎನ್ನುತ್ತಿದ್ದರು. ಹಂಪಿಯಲ್ಲಿ ಇಂದಿಗೂ ಮಹಾನವಮಿ ದಿಬ್ಬವನ್ನು ಕಾಣಬಹುದು. ಮುಂದೆ ಮೈಸೂರು ಮಹಾರಾಜರು ಅದನ್ನು ಮುಂದುವರಿಸಿ ನಾಡಿನ ತುಂಬಾ ದಸರಾ ವೈಭವ ಪಸರಿಸುವಂತೆ ಮಾಡಿದರು. ಈ ವೈಭವದ ಉತ್ಸವವನ್ನು ಉಳಿಸಿ ನಾಡಹಬ್ಬವಾಗಿ ಬೆಳೆಸಿದ್ದಕ್ಕಾಗಿ ನಾವು ಅವರಿಗೆ ಸದಾ ಕೃತಜ್ಞರಾಗಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ನಿರಾಶ್ರಿತರಾದವರಿಗೆ ಮನೆ ಕಟ್ಟಿಕೊಡಲು 25 ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಸುಧಾಮೂರ್ತಿ ಘೋಷಿಸಿದ್ದಾರೆ. 

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸುಧಾಮೂರ್ತಿ:
ಮೈಸೂರು ದಸರಾ ಉದ್ಘಾಟನಾ ಭಾಷಣದಲ್ಲಿ ಸುಧಾಮೂರ್ತಿಯವರನ್ನು ಹಾಡಿ ಹೊಗಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ತಾಯಿ ಹೃದಯವನ್ನು ಹೊಂದಿರುವ ಸುಧಾಮೂರ್ತಿ ಅವರು ತಾಯಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸಿದರೆ, ನಾಡಿನ ಎಲ್ಲಾ ಸಮಸ್ಯೆಗಳು ಬಗೆಹರಿದು ಚಾಮುಂಡೇಶ್ವರಿ ರಕ್ಷಣೆ ನೀಡುತ್ತಾಳೆ. ಈ ಕಾರಣದಿಂದಲೇ ಅವರಿಂದ ಪೂಜೆ ಮಾಡಿಸಲಾಗಿದೆ. ಎಲ್ಲರಿಗೂ ಬೇಕಿರುವುದು ತಾಯಿ ಹೃದಯ, ಕೊಡಗಿನ ಜನರ ಸಮಸ್ಯೆಗೆ ಸ್ಪಂದಿಸಿದ ಸುಧಾಮೂರ್ತಿಯವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸುಧಾಮೂರ್ತಿ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ನಾಡಿನ ಮಹಿಳೆಯರಿಗೆ ನಾವು ನೀಡುವ ಗೌರವ ಎಂದರು.

ರಾಜ್ಯದ ಬಗ್ಗೆ ಹಲುವು ಕನಸು ಕಂಡಿದ್ದೇನೆ ಎಂದ ಕುಮಾರಸ್ವಾಮಿ:
ನಾನು ರಾಜಕಾರಣಿ ಆಗಲು ಬರಲಿಲ್ಲ. ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೇನೆ. ಎರಡನೇ ಬಾರಿಗೆ ಸಿಎಂ ಆಗಿದ್ದೇನೆ. ಈ ರಾಜ್ಯದ ಬಗ್ಗೆ ಹಲವು ಕನಸು ಕಂಡಿದ್ದೇನೆ. ನೀವು ನಮ್ಮ ಮೇಲೆ ವಿಶ್ವಾಸವಿಡಿ, ನಮ್ಮ ಸರ್ಕಾರದ ಮೇಲೆ ಭರವಸೆ ಇಡಿ ಎಂದರು. ಮುಂದುವರೆದು ಮಾತನಾಡಿದ ಅವರು, ಇದ್ದಕ್ಕಿದ್ದಂತೆ ಉಪಚುನಾವಣೆ ಘೋಷಣೆಯಾದ ಕಾರಣ ದಸರಾಗೆ ಬರಲಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ ದೇವರ ದಯೆಯಿಂದ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾವು ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂದು ಹೇಳಿದರು.

Trending News