ಕಲಬುರಗಿ: ನಗರದ ಹೃದಯ ಭಾಗದಲ್ಲಿ 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು 2024ರ ಜನವರಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಶನಿವಾರ ಇಲ್ಲಿನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಅವರೊಂದಿಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬರೀ ಕಟ್ಟಡ ಉದ್ಘಾಟನೆ ಅಷ್ಟೆ ಅಲ್ಲ. ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆ ಆರಂಭಿಸಲಿದೆ. ಹೀಗಾಗಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಲಿಗೆ ಸೂಚಿಸಲಾಗಿದೆ ಎಂದರು.
ಇನ್ನು ನೂತನ ಆಸ್ಪತ್ರೆಗೆ ತಕ್ಕಂತೆ ರೋಗಿಗಳಿಗೆ ಸೇವೆ ನೀಡಲು ಸಿಬ್ಬಂದಿಗಳ ನೇಮಕಾತಿಗೂ ಸಂಪುಟ ಒಪ್ಪಿಗೆ ನೀಡಿದ್ದು, ಹಣಕಾಸು ಇಲಾಖೆಯು ಸಹಮತಿ ನೀಡಿದೆ. ಲೋಕಾರ್ಪಣೆ ಮುನ್ನವೇ ನೇಮಕಾತಿ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗುವುದು. ಒಟ್ಟಾರೆಯಾಗಿ ಜಯದೇವ ಸಂಸ್ಥೆ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಇದನ್ನೂ ಓದಿ: ನಾಳೆಯಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಚಾಲನೆ
ಕಲಬುರಗಿಯಲ್ಲಿ 2016ರಲ್ಲಿ ಜಯದೇವ ಆಸ್ಪತ್ರೆ ಆರಂಭಕ್ಕು ಮುನ್ನ ಇಲ್ಲಿನ ಹೃದ್ರೋಗಿಗಳು ಚಿಕಿತ್ಸೆಗೆ ನೆರೆಯ ಸೋಲಾಪೂರ, ಹೈದ್ರಾಬಾದ್ ಅಥವಾ ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಜಯದೇವ ಆಸ್ಪತ್ರೆ ಸ್ಥಾಪನೆ ಪರಿಣಾಮ ಇದೀಗ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೋಲಾಪೂರದ ರೋಗಿಗಳು ಇಲ್ಲಿನ ಜಯದೇವ ಸಂಸ್ಥೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈ ಸಂಸ್ಥೆಯ ಸೇವಾ ಮನೋಭಾವನೆ ಮತ್ತು ಗುಣಮಟ್ಟದ ಚಿಕಿತ್ಸೆ ತೋರಿಸುತ್ತದೆ. ಜಯದೇವ ಎಂಬ ಪ್ರತಿಷ್ಠಿತ ಸಂಸ್ಥೆ ಬರೀ ದೇಶದಲ್ಲಿಯೇ ಅಷ್ಟೆ ಅಲ್ಲ ವಿದೇಶದಲ್ಲಿಯೂ ತನ್ನ ಸೇವೆಯಿಂದ ಮನೆ ಮಾತಾಗಿದೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆ ಕಲಬುರಗಿಯಲ್ಲಿ ನಿರ್ಮಿಸಲಾದ ಟ್ರಾಮಾ ಸೆಂಟರ್ ಮುಂದಿನ ಎರಡ್ಮೂರು ತಿಂಗಳಲ್ಲಿ ರೋಗಿಗಳಿಗೆ ಸೇವೆ ನೀಡಲು ಕಾರ್ಯರಂಭಗೊಳಿಸಲು ಚರ್ಚೆ ನಡೆದಿದ್ದು, ಇದಕ್ಕಾಗಿ ಬೆಂಗಳೂರಿನ ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ.ಬಾಲಾಜಿ ಪೈ. ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಆಸ್ಪತ್ರೆ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕಲಬುರಗಿ, ಬೆಳಗಾವಿ ಹಾಗೂ ಮೈಸೂರಲ್ಲಿ ಆಸ್ಪತ್ರೆ ನಿರ್ಮಿಸಲು ಹಿಂದೇ ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರಾತಿ ನೀಡಲಾಗಿತ್ತು, ಮುಂದಿನ 6 ತಿಂಗಳಲ್ಲಿ ಜಿಮ್ಸ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಲಬುರಗಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ಜೀವ ತುಂಬಲಾಗುವುದು. ಕಲಬುರಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮತ್ತಷ್ಟು ಸೇವೆ ಒದಗಿಸಲು ಸಹ ಕ್ರಮ ಕೈಗೊಂಡಿದೆ. ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಬಡವರಿಗೆ ಒಂದೇ ಸಂಸ್ಥೆಯಡಿ ಎಲ್ಲಾ ಆರೋಗ್ಯ ಸೇವೆ ದೊರಕಬೇಕೆಂಬ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದ್ದು, ಪ್ರಸ್ತುತ ರಾಜ್ಯದ 22 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿಯೂ ಸಹ ಮುಂದಿನ ವರ್ಷದಿಂದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆರ್ಥಿಕ ಇತಿಮಿತಿ ನೋಡಿಕೊಂಡು ಹೆಜ್ಜೆ ಇಡಲಾಗುವುದು. ಪ್ರಸ್ತುತ 5 ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ಪ್ರಥಮಾದ್ಯತೆ ಆಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಉತ್ತರಿಸಿದರು.
ಇದನ್ನೂ ಓದಿ: ಅಷ್ಟು ಜನರನ್ನು ನೋಡಿ ಅವಿವಾ ಹೇಳಿದ್ದೇನು ಗೊತ್ತಾ..?
371 ಹಾಸಿಗೆ ಆಸ್ಪತ್ರೆ: ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಬುರಗಿ ವಿಭಾಗಕ್ಕೆ 371ಜೆ ವಿಶೇಷ ಮೀಸಲಾತಿ ದೊರಕಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಸಂಸ್ಥೆಯ ನೂತನ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯೂ 371 ಇರಲಿದೆ. ಈ ಹಿಂದೆ 350 ಹಾಸಿಗೆಯ ಆಸ್ಪತ್ರೆ ಎಂದು ಹೇಳಲಾಗಿತ್ತು. ವಿಶೇಷ ಸ್ಥಾನಮಾನ ಹೊಂದಿರುವ ಪ್ರದೇಶ ಇದಾಗಿರುವುದರಿಂದ ಹಾಸಿಗೆ ಸಂಖ್ಯೆ 371ಕ್ಕೆ ಏರಿಸಲು ನಿರ್ಧರಿಸಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಜಿ+3 ಮಹಡಿಯ ಈ ಆಸ್ಪತ್ರೆ 100 ಐ.ಸಿ.ಯು ಬೆಡ್, 3 ಓ.ಟಿ. ಥಿಯೇಟರ್, 3 ಕ್ಯಾಥಲ್ಯಾಬ್ ಇರಲಿವೆ. ಬೆಂಗಳೂರು ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಲಬುರಗಿಯ ಈ ನೂತನ ಆಸ್ಪತ್ರೆಯಲ್ಲಿ ಸಿಗಲಿದ್ದು, ಒಟ್ಟಾರೆಯಾಗಿ ಇದೊಂದು ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ, ಕಲಬುರಗಿ ಆಸ್ಪತ್ರೆಯ ಸಮನ್ವಯಾಧಿಕಾರಿ ಡಾ.ಬಾಬುರಾವ ಹುಡಗಿಕರ್, ಡಿ.ಸಿ.ಸಿ. ಅಧ್ಯಕ್ಷ ಜಯದೇವ ಗುತ್ತೇದಾರ ಇದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.