ಬೆಂಗಳೂರು: ನಾನೆಂದೂ ಸೇಡಿನ ರಾಜಕಾರಣ ಮಾಡಿದವನಲ್ಲ, ನನ್ನನ್ನು ದ್ವೇಷಿಸುವವರನ್ನೂ ಪ್ರೀತಿಯಿಂದ ಕಾಣುತ್ತೇನೆ. ಫರ್ಗೆಟ್ ಅಂಡ್ ಫರ್ಗಿವ್ ಎಂಬ ವಾಕ್ಯದಲ್ಲಿ ನಂಬಿಕೆ ಇಟ್ಟವನು ನಾನು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಅದನ್ನು ಸರಿದಾರಿಗೆ ತರಬೇಕು. ಮುಮ್ನ್ದಿನ ನಾಲ್ಕೈದು ತಿಂಗಳುಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ, ಜುಲೈ 31ರ ಬಳಿಕ ರಾಜ್ಯದಲ್ಲಿ ಒಂದು ರೂ.ಸಹ ಖರ್ಚು ಮಾಡದಂತಹ ಸಂದಿಗ್ಧ ಪರಿಸ್ಥಿತಿ ಇತ್ತು. ಆದರೆ, ರಾಜ್ಯಪಲಾರು ಆಹ್ವಾನ ನೀಡಿದ್ದರಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ರೈತರು ನಮ್ಮೆಲ್ಲರ ಕಣ್ಣು, ಹೀಗಾಗಿ ರೈತರ 300 ಕೋಟಿ ರೂ.ಗಳ ಸಾಲ ಮನ್ನಾ ಮಾಡುವಂತಹ ನಿರ್ಧಾರ ಕೈಗೊಂಡಿದ್ದೇನೆ. ಮತದಾರರೇ ನಮ್ಮ ಮಾಲೀಕರು. ಹಾಗಾಗಿ ನನ್ನ ಅಧಿಕಾರವಧಿಯಲ್ಲಿ ಅವರ ಸೇವೆ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.