ದಿಲ್ಲಿ ಸಂಸತ್ತಿನಲ್ಲಿ ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದ ರೈಲ್ವೆ ಕಾಲೋನಿ ಹುಡುಗ

Last Updated : Nov 12, 2018, 08:46 PM IST
ದಿಲ್ಲಿ ಸಂಸತ್ತಿನಲ್ಲಿ ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದ ರೈಲ್ವೆ ಕಾಲೋನಿ ಹುಡುಗ  title=
ಹುಬ್ಬಳ್ಳಿ ರೈಲ್ವೆ ಕಾಲೋನಿಯಲ್ಲಿನ ತಮ್ಮ ಮನೆಯ ಮುಂದೆ ಕೇಂದ್ರ ಸಚಿವ ಅನಂತಕುಮಾರ್ (Photo courtesy :ananth.org)

ಹುಬ್ಬಳ್ಳಿಯ ಎಂಟಿಎಸ್ ರೇಲ್ವೆ ಕಾಲೋನಿಯಲ್ಲಿ ಆಡಿಕೊಂಡಿದ್ದ ಆ ಹುಡುಗ ಮುಂದೆ ದೆಹಲಿ ಸಂಸತ್ತಿನವರೆಗೆ ತನ್ನದೇ ಛಾಪು ಮೂಡಿಸುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಆದರೆ ಕಾಲ ಕಳೆದಂತೆ ಆತ ಬೆಳೆದ ಪರಿ ನಿಜಕ್ಕೂ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತದೆ.

ಹೌದು, ಅನಂತಕುಮಾರ್ ಇಂದು ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗದ ಶಿಖರಕ್ಕೆರಲು ಕಾರಣ ವಾಣಿಜ್ಯ ನಗರಿ ಹುಬ್ಬಳ್ಳಿ. ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿನ ಒಡನಾಟದಿಂದಾಗಿ ಹುಬ್ಬಳ್ಳಿ ಅವರಿಗೆ ರಾಜಕೀಯ ಜೀವನಕ್ಕೆ ಮೊದಲ ಅಡಿಪಾಯವನ್ನು ಹಾಕಿತು.ರೇಲ್ವೆ ಉದ್ಯೋಗಿಯಾಗಿದ್ದ ಅನಂತ್ ಕುಮಾರ್ ತಂದೆ ನಾರಾಯಣ ಶಾಸ್ತ್ರಿ ಹಲವಾರು ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿರುವ ಎಂಟಿಎಸ್ ರೇಲ್ವೆ ಕಾಲೋನಿಯಲ್ಲಿ ವಾಸವಾಗಿದ್ದರು.ಇದೇ ವೇಳೆಗೆ ತಾಯಿ ಗಿರಿಜಾ ಶಾಸ್ತ್ರಿ ಜನ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.ಈ ಹಿನ್ನಲೆಯಲ್ಲಿ ಅವರು ಮುಂದೆ 1985-86 ರ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉಪ ಮೇಯರ್ ಆಗಿ ಕಾರ್ಯನಿರ್ವಹಿಸಿದರು. ಹೀಗಾಗಿ ಕುಟುಂಬದಲ್ಲಿನ ರಾಜಕೀಯ ವಾತಾವರಣ ಅನಂತ್ ಕುಮಾರ್ ಅವರಿಗೆ ರಾಜಕಾರಣಕ್ಕೆ ಧುಮುಕಲು ಪ್ರೇರಣೆ ನೀಡಿತು.

ಅನಂತ್ ಕುಮಾರ್ ತಮ್ಮ ಹೈಸ್ಕೂಲ್ ಅಭ್ಯಾಸವನ್ನು ಲ್ಯಾಮಿಂಗಟನ್ ಸ್ಕೂಲ್ ನಲ್ಲಿ ಮುಗಿಸಿ ಮುಂದೆ ಪಿ.ಸಿ.ಜಾಬಿನ್ ಕಾಲೇಜ್ ನಲ್ಲಿ ಪಿಯುಸಿ ಮುಗಿಸಿದರು. ತದನಂತರ ಹುಬ್ಬಳ್ಳಿಯಲ್ಲಿರುವ  ಕೆಎಲ್ಇ ಸಂಸ್ಥೆಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು 1975-80ರ ಅವಧಿಯಲ್ಲಿ ಜೆಎಸ್ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಅನಂತಕುಮಾರ್ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮುಂದೆ 1975 ರ ಅವಧಿಯಲ್ಲಿ ಇಂದಿರಾಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಸೆರೆಮನೆ ವಾಸವನ್ನು ಸಹ ಅನುಭವಿಸಿದ್ದರು. ಹೀಗೆ ಇವರ ನಾಯಕತ್ವ ಗುಣವನ್ನು ಗುರುತಿಸಿದ ಸಂಘಟನೆ ಮುಂದೆ ಇವರಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ವಹಿಸಿತು. ಈ ಕಾರಣಕ್ಕಾಗಿ ಅವರು ಹುಬ್ಬಳ್ಳಿಯನ್ನು ಬಿಟ್ಟು ಬೆಂಗಳೂರಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು. ಆದರೆ ಅನಂತಕುಮಾರ್ ಅವರು ಬೆಂಗಳೂರಿನಲ್ಲಿ ನೆಲೆಗೊಂಡಿದ್ದರು ಸಹಿತ ಹುಬ್ಬಳ್ಳಿ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ಎಂದೂ ಕಳೆದುಕೊಂಡಿರಲಿಲ್ಲ.ಇದಕ್ಕೆ ನಿದರ್ಶನವೆಂಬಂತೆ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಪ್ರಮುಖ ಕಚೇರಿಗಳು ದಕ್ಷಿಣ ಕರ್ನಾಟಕದ ಬೆಂಗಳೂರಿಗೆ ಸೀಮಿತವಾಗಿದ್ದನ್ನು ಅರಿತುಕೊಂಡಿದ್ದ ಅನಂತ್ ಕುಮಾರ್, ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬೆಂಗಳೂರಿನಲ್ಲಿನ ನೈಋತ್ಯ ವಲಯ ರೇಲ್ವೆ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅನಂತ್ ಕುಮಾರ್ ಬಲಪಂಥೀಯ ಪಕ್ಷದಲ್ಲಿದ್ದರೂ ಕೂಡ ಎಂದಿಗೂ ಕೂಡ ಪ್ರಖರ ಹಿಂದುತ್ವವಾದಿಯಾಗಿರಲಿಲ್ಲ ಬಹುಶಃ ಇದೇ ಕಾರಣಕ್ಕಾಗಿ ಅವರು ವೆಂಕಯ್ಯನಾಯ್ಡು ಉಪರಾಷ್ಟ್ರಪತಿಯಾದಾಗಿನಿಂದ ಮೋದಿ ಸರ್ಕಾರದಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ಸಾಮರಸ್ಯ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದರು. ಇನ್ನು ಕನ್ನಡ ಮತ್ತು ಕರ್ನಾಟಕದ ವಿಷಯಗಳು ಬಂದಾಗ ಅನಂತ್ ಕುಮಾರ ಅವರದ್ದು ಮುನ್ನಲೆಯ ಧ್ವನಿ. ಅದು ಜಲವಿವಾದವಾಗಿರಬಹುದು, ರಾಜ್ಯಕ್ಕೆ ಕೇಂದ್ರದ ಧನ ಸಹಾಯವಿರಬಹುದು ಈ ಎಲ್ಲ ವಿಷಯಗಳಲ್ಲಿ ಅನಂತ್ ಕುಮಾರ್ ಅವರ ಹೆಸರು ಕರ್ನಾಟಕದ ಪರ ಲುಟಿನ್ಸ್ ಮೂಲೆಗಳಲ್ಲಿ ದೊಡ್ಡ ಲಾಬಿಯಾಗಿ ಕೆಲಸ ಮಾಡುತ್ತಿತ್ತು.

ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ನರಗುಂದದ ಜಗನ್ ನಾಥ್ ರಾವ್ ಜೋಷಿ ಬಿಟ್ಟರೆ ಉತ್ತರ ಕರ್ನಾಟಕದ ಭಾಗದಲ್ಲಿ ಬೆಳೆದು ಬಿಜೆಪಿ ಪರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿ ಎಂದರೆ ಅದು ಅನಂತ್ ಕುಮಾರ್ ಮಾತ್ರ. ಇನ್ನು ದೆಹಲಿ ರಾಜಕಾರಣಕ್ಕೆ ಬಂದಾಗಲೆಲ್ಲಾ ದಕ್ಷಿಣ ಭಾರತದ ನಾಯಕರುಗಳಿಗೆ ಪ್ರಮುಖವಾಗಿ ಕಾಡುವ ಸಮಸ್ಯೆ ಹಿಂದಿ ಮಾತುಗಾರಿಕೆ. ಆದ್ದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗಕ್ಕೆರಬೇಕಾದರೆ ಹಿಂದಿಯಲ್ಲಿನ ವಾಕ್ ಚಾತುರ್ಯ ಮಾತ್ರ ಅವರಿಗೆ ನೆರವಾಗಬಲ್ಲದು ಎನ್ನುವ ಮಾತು ಇಂದಿಗೂ ಕೂಡ ಚಾಲ್ತಿಯಲ್ಲಿದೆ. ಆದರೆ ಅನಂತ್ ಕುಮಾರ್ ಈ ಎಲ್ಲ ಮೇರೆಗಳನ್ನು ಮೀರಿದ ನಾಯಕರಾಗಿ ಬೆಳೆದಿದ್ದು ಮಾತ್ರ ಗಮನಾರ್ಹ ಸಂಗತಿ. 

ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಯಡಿಯೂರಪ್ಪನವರ ಹೋರಾಟದ ವ್ಯಕ್ತಿತ್ವ, ಅನಂತಕುಮಾರ್ ಅವರ ಸಂಘಟನೆ ಮತ್ತು ಚಿಂತನಾ ಗುಣಗಳು ಪ್ರಮುಖ ಪಾತ್ರವಹಿಸಿವೆ. ಈ ಎಲ್ಲ ಮೇಳೈಕೆಯಿಂದಾಗಿ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯವಾಯಿತು.ಇದಕ್ಕೆ ಪೂರಕ ಎನ್ನುವಂತೆ ಕರ್ನಾಟಕದ ಬಿಜೆಪಿಯಲ್ಲಿ ಹಲವು ಬಾರಿ ರಾಜ್ಯಕ್ಕೆ ಯಡಿಯೂರಪ್ಪ, ಕೇಂದ್ರಕ್ಕೆ ಅನಂತಕುಮಾರ್ ಎನ್ನುವ ಮಾತು ಸಾಕಷ್ಟು ಜನಜನೀತವಾಗಿತ್ತು. ಬಹುಶಃ ಇದೇ ಕಾರಣಕ್ಕಾಗಿಯೇ ಅವರು 1996 ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮೂಲಕ ಗೆಲುವು ಸಾಧಿಸಿ ಸಂಸತ್ತಿಗೆ ಪ್ರವೇಶಿಸಿದ ನಂತರ ಮತ್ತೆ ರಾಜ್ಯ ರಾಜಕಾರಣದ ಕಡೆ ಹಿಂತಿರುಗಿ ನೋಡಲೇ ಇಲ್ಲ. ಸತತ 6 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದರು.

ಇನ್ನು ದ್ವೇಷದ ರಾಜಕಾರಣವೇ(hate politics)ಪ್ರಾಮುಖ್ಯತೆ ಪಡೆದು ರಾಜಕೀಯದಲ್ಲಿನ ಮುತ್ಸದ್ದಿತನವೇ ಇಲ್ಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಸೇತುಬಂಧವಾಗಿ ಕಾರ್ಯನಿರ್ವಹಿಸುತ್ತಿದ್ದ ಅನಂತಕುಮಾರ್ ರಂತಹ ವ್ಯಕ್ತಿಗಳ ಕಣ್ಮರೆ ನಿಜಕ್ಕೂ ವಿಷಾಧಕರ ಸಂಗತಿ.

  - ಮಂಜುನಾಥ ನರಗುಂದ
   

 

 

Trending News