ಬೆಂಗಳೂರು: ರಾಜ್ಯಾದ್ಯಂತ ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಜೂನ್ 16, 17, 18 ರಂದು 3 ದಿನ ನಡೆಯಲಿದೆ ಸಿಇಟಿ ಪರೀಕ್ಷೆ ನಡೆಯಲಿದೆ. ಈ ಬಾರಿ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಧಿಕಾರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಹಾಲ್ ಟಿಕೆಟ್ ಡೌನ್ ಲೋಡ್ ಗೆ 4 ಬಾರಿ ಸಮಯ ವಿಸ್ತರಣೆ ಮಾಡಲಾಗಿದ್ದು, ಎಲ್ಲರಿಗೂ ಪ್ರವೇಶ ಪತ್ರ ತಲುಪಿದೆ. ಗಡಿ ಭಾಗದ 6 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿಯೂ ಅದೇ ರೀತಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
486 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ:
ಬೆಂಗಳೂರಿನಲ್ಲಿ 87 ಕೇಂದ್ರ, ಇತರೆ ಜಿಲ್ಲೆಗಳಲ್ಲಿ 399 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಾಗಿದೆ. ಕಳೆದ ವರ್ಷಕ್ಕಿಂದ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಒಟ್ಟು 486 ವೀಕ್ಷಕರು, 972 ವಿಶೇಷ ಜಾಗೃತ ದಳದ ಸದಸ್ಯರು, 486 ಪ್ರಶ್ನೆಪತ್ರಿಕೆ ಪಾಲಕರು, ಸುಮಾರು 9600 ಕೊಠಡಿ ಮೇಲ್ವಿಚಾರಕರು ಸೇರಿದಂತೆ ಒಟ್ಟಾರೆ 20,483 ಸಿಬ್ಬಂದಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಮನೆಯ ಹಿತ್ತಲದಲ್ಲಿ ಅರಳಿದ 'ರಾತ್ರಿ ರಾಣಿ': ಕತ್ತಲಲಿ ಪರಿಮಳ ಸೂಸಿ, ಮುಂಜಾನೆ ಮುದುಡಿದ ಬ್ರಹ್ಮ ಕಮಲ
ಹೊರನಾಡು, ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನ ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಯಲಿದೆ. ಕನ್ನಡ ಭಾಷೆ ಪರೀಕ್ಷೆಗೆ ಒಟ್ಟು 1,708 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಸಿಇಟಿ ಪರೀಕ್ಷೆ ನಡೆದ ಒಂದು ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎಂದು ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆಗೆ ಕಟ್ಟು ನಿಟ್ಟಿನ ನಿಯಮ ಜಾರಿ:
ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ ಎಂದು ತಿಳಿಸಲಾಗಿದ್ದೂ ಹಿಜಾಬ್ ಧರಿಸುವಂತಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸೂಚನೆಯನ್ನು ನೀಡಿದೆ. ಆಭರಣಗಳು ಧರಿಸುವಂತಿಲ್ಲ, ಮೊಬೈಲ್, ಬ್ಲೂಟೂಥ್, ಕೈಗಡಿಯಾರ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಾಳು ನಿಷೇಧ ವಿಧಿಸಲಾಗಿದ್ದು. 2,16,525 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಪರೀಕ್ಷೆಯನ್ನು ಬರೆಯಲಿದ್ದಾರೆ. ಕೆಸಿಇಟಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಅವುಗಳನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಪರೀಕ್ಷೆಗೆ ಮಾಸ್ಕ್ ಕಡ್ಡಾಯ:
ಒಎಂಆರ್ ಉತ್ತರ ಪತ್ರಿಕೆಯಲ್ಲಿ ತಮ್ಮ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಶನ್ ಕೋಡ್ ನಮೂದಿಸಬೇಕು. ಮೊದಲ ಗಂಟೆ ಬಾರಿಸಲಿರುವ ನಿಗದಿತ ಅವಧಿಗಿಂತಲೂ ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ ಮತ್ತು ಯಾವುದಾದರೂ ಒಂದು ಸೂಕ್ತ ಗುರುತಿನ ಪತ್ರವನ್ನು ತರಬೇಕಿದೆ. (ಕಾಲೇಜಿನ ಗುರುತುಪತ್ರ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಆಧಾರ್/ಪ್ಯಾನ್ ಕಾರ್ಡ್, ದ್ವಿತೀಯ ಪಿಯುಸಿ/12ನೇ ತರಗತಿಯ ಪ್ರವೇಶ ಪತ್ರ ಇತ್ಯಾದಿಗಳ ಪೈಕಿ ಒಂದು). ಯಾವುದೇ ತರಹದ ಕೈಗಡಿಯಾರಗಳನ್ನು ಕಟ್ಟಿಕೊಂಡು ಬರುವಂತಿಲ್ಲ. ಟ್ಯಾಬ್, ಮೊಬೈಲ್, ಕ್ಯಾಲ್ಕುಲೇಟರುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ : ಇದು ಪ್ರೀತಿ-ಸಮಾನತೆಯ ಸಂಕೇತ
ಪಿಎಸ್‌ಐ ನೇಮಕಾತಿ ಹಗರಣದಿಂದ ಎಚ್ಚೆತ್ತಿರುವ ಪರೀಕ್ಷಾ ಪ್ರಾಧಿಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಶಿಕ್ಷಕರ ನೇಮಕಾತಿ ಪರೀಕ್ಷಾ ಸಮಯದಲ್ಲಿ ತೆಗೆದುಕೊಂಡಂತೆ ಕೆಲವು ಭದ್ರತಾ ಕ್ರಮಗಳು ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸುವ ವಿಧಾನವನ್ನು ಅನುಸರಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವುದು ಕಡ್ಡಾಯ ಮಾಡಲಾಗಿದೆ.
ಸಿಇಟಿ ಪರೀಕ್ಷಾ ವೇಳಾಪಟ್ಟಿ:
- 16-6-22ರಂದು-10.30 ರಿಂದ 11.30 - ಜೀವಶಾಸ್ತ್ರ
- 16-6-22 ರಂದು 2.30 ರಿಂದ 3.30-ಗಣಿತ
- 17-6-22ರಂದು 10.30 ರಿಂದ 11.30- ಭೌತಶಾಸ್ತ್ರ
- 17-6-22ರಂದ 2.30 ರಿಂದ 3.30-ರಸಾಯನಶಾಸ್ತ್ರ
- 18-6-22ರಂದು-10.30 ರಿಂದ 11.30-ಹೊರನಾಡ ಕನ್ನಡಿಗರಿಗೆ, ಕನ್ನಡ ಪರೀಕ್ಷೆ
ಇದೇ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಗೆ ಸಹಾಯಕ ಪ್ರಾಧ್ಯಪಕರ ನೇಮಕಾತಿ ಪರೀಕ್ಷೆ ಅಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ವಿಚಾರ ಕೋರ್ಟ್ ನಲ್ಲಿದೆ ಸದ್ಯ ಈ ಬಗ್ಗೆ ಚರ್ಚಿಸೋದು ಸೂಕ್ತವಲ್ಲ ಎಂದು ಉತ್ತರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.