ಅಯ್ಯೋ.. ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಹಿಂದಿ ಹೇರಿಕೆ ವಿರುದ್ಧ ಎಚ್‌ಡಿಕೆ ಆಕ್ರೋಶ

ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ

Written by - Zee Kannada News Desk | Last Updated : Oct 11, 2021, 01:10 PM IST
  • ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ
  • ಕನ್ನಡ ಕಡೆಗಣಿಸಿ ಹಿಂದಿಗೆ ಪ್ರಾಶಸ್ತ್ಯ ನೀಡಿದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
  • ಕನ್ನಡವನ್ನು ಕರ್ನಾಟದಿಂದಲೇ ಮೂಲೆಗುಂಪು ಮಾಡಬೇಕೆಂಬುದು ಬಿಜೆಪಿಯ ಹಿಡನ್ ಅಜೆಂಡಾವೇ? ಎಂದು ಪ್ರಶ್ನಿಸಿದ ಎಚ್‌ಡಿಕೆ
ಅಯ್ಯೋ.. ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಹಿಂದಿ ಹೇರಿಕೆ ವಿರುದ್ಧ ಎಚ್‌ಡಿಕೆ ಆಕ್ರೋಶ title=
ಹಿಂದಿ ಹೇರಿಕೆ ವಿರುದ್ಧ ಎಚ್‌ಡಿಕೆ ಆಕ್ರೋಶ

ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. #ನಮ್ಮಕನ್ನಡ #ನಮ್ಮಕರ್ನಾಟಕ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ ನೀಡಿರುವುದಕ್ಕೆ ಕಿಡಿಕಾರಿದ್ದಾರೆ.

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ 25ನೇ ಘಟಿಕೋತ್ಸವದಲ್ಲಿ ಹಿಂದಿ(Hindi imposition)ಗೆ ಅಗ್ರಸ್ಥಾನ! ಇಂಗ್ಲೀಷ್ʼಗೆ ದ್ವಿತೀಯ ಸ್ಥಾನ! ಕನ್ನಡಕ್ಕೆ ಮೂರನೇ ಸ್ಥಾನ!! ಅಯ್ಯೋ.. ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ. ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ, ಒಬ್ಬ ಸಚಿವರು, ಇಬ್ಬರು ಸಂಸದರು ಇದ್ದರು. ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು 3ನೇ ಸ್ಥಾನಕ್ಕಿಳಿಸಿದ್ದ ಆ ವೇದಿಕೆಯ ಮೇಲೆ ಕೂರಲು ಅವರಿಗೆ ಮನಃಸಾಕ್ಷಿಯಾದರೂ ಹೇಗೆ ಬಂತು? ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ’ ಅಂತಾ ಎಚ್‌ಡಿಕೆ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ: ಕಾಂಗ್ರೆಸ್ ಕಿಡಿ

‘ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ.  ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ? ಕನ್ನಡವನ್ನು ಕರ್ನಾಟದಿಂದಲೇ ಮೂಲೆಗುಂಪು ಮಾಡಬೇಕು ಎಂಬುದು ಬಿಜೆಪಿ(BJP)ಯ ಹಿಡನ್ ಅಜೆಂಡಾವೇ?’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

‘ಕನ್ನಡ(Kannada)ಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಕೇಂದ್ರ ಪರೀಕ್ಷೆಯಲ್ಲಿ ಅನ್ಯಾಯ, ನೇಮಕಾತಿಯಲ್ಲಿ ನಮ್ಮವರ ಕಡೆಗಣನೆ. ಒಕ್ಕೂಟ ವ್ಯವಸ್ಥೆಯಲ್ಲಿ ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಾಗಿ ನಾವು ಕೊಳೆಯಬೇಕಾ? ಸ್ವಾಭಿಮಾನಿ ಕನ್ನಡಿರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು’ ಎಂದು ಎಚ್ ಡಿಕೆ ಹಿಂದಿ ಏರಿಕೆ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಇದನ್ನೂ ಓದಿ: ಸಂಪೂರ್ಣವಾಗಿ ಬಿಎಸ್‌ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್

ಈ ಹಿಂದೆಯೂ ಎಚ್.ಡಿ.ಕುಮಾರಸ್ವಾಮಿ ಹಿಂದಿ ಏರಿಕೆ(Hindi imposition) ವಿರುದ್ಧ ಕಿಡಿಕಾರಿದ್ದರು. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕೇಂದ್ರದ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News