ಬೆಂಗಳೂರು : ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು, ಜನರ ಕೈಗೆ ಅಧಿಕಾರ ಹೋಗಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಈ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪಂಡಿತ್ ನೆಹರು, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು. ಸಂಘಟನೆ ಬಲಗೊಳಿಸಬೇಕು. ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ. ಮೊದಲು ಪಕ್ಷದ ಕೆಲಸ ಮಾಡಬೇಕು. ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ. ಖಾದಿ ಬಟ್ಟೆ ಹಾಕಿಕೊಂಡು, ಕಾರು ಇಟ್ಟುಕೊಂಡು ಎಂಎಲ್ ಸಿ ಮಾಡಿ, ಅಧ್ಯಕ್ಷನನ್ನಾಗಿ ಮಾಡಿ ಎಂದರೆ ಅದು ಇಲ್ಲಿ ನಡೆಯುವುದಿಲ್ಲ. ಕೆಲಸ ಮಾಡುವವರಿಗೆ ಆದ್ಯತೆ. ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು. ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ ಎಂದರು.
ಇದನ್ನೂ ಓದಿ: Karnataka PUC-2 Result 2024: ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ... ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ
ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ರಾಜೀವ್ ಗಾಂಧಿ:
ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ರಾಜೀವ್ ಗಾಂಧಿ ಅವರು. ಸಾವಿರಾರು ಯುವ ನಾಯಕರನ್ನು ಸಮಾಜಕ್ಕೆ ಕೊಡುಗೆ ಕೊಟ್ಟ, ಯುವ, ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸಿದವರು ಅವರು ಎಂದರು.
ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದಾಗ ಕೆ.ಎಚ್.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈ ವೇಳೆ ಸುಮಾರು 70 ಕ್ಕೂ ಹೆಚ್ಚು ಯುವ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ರಾಜೀವ್ ಗಾಂಧಿ ಅವರು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು, ನಂತರವೂ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದರು.
ಚನ್ನಪಟ್ಟಣದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆದ ಸಂದರ್ಭದಲ್ಲಿ ನನ್ನನ್ನು ಬೇರೆ ಮಾರ್ಗದಲ್ಲಿ ಅವರ ಭೇಟಿಗೆ ಕರೆತರಲಾಯಿತು. ಅಂದು ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಬದಲಾವಣೆ ಮಾಡುವ ಸಂದರ್ಭ ಬಂದಿತ್ತು. ಆಗ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಯಿತು ಎಂದರು.
“ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳ ಯುವ ನಾಯಕರಿಗೆ ಸ್ಥಾನ ನೀಡಿ ಎರಡನೇ ಸಾಲಿನ ನಾಯಕತ್ವ ತಯಾರು ಮಾಡಬೇಕು” ಎಂದು ಬಂಗಾರಪ್ಪ ಅವರಿಗೆ ರಾಜೀವ್ ಗಾಂಧಿ ಸೂಚನೆ ನೀಡಿದ್ದರು. ಆದ ಕಾರಣ ನಾನು ಮೊದಲ ಬಾರಿಗೆ ಮಂತ್ರಿಯಾದೆ ಎಂದರು.
ನಾನು, ಸಲೀಂ ಮಹಮ್ಮದ್, ರತ್ನಪ್ರಭ ಅವರು ಸೇರಿದಂತೆ ಅನೇಕರನ್ನು ಸುಮಾರು 180 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಕಳುಹಿಸಿದ್ದರು. ಕಾಂಗ್ರೆಸ್ ಪಕ್ಷದ ಯುವಕರಲ್ಲಿ ನಾಯಕತ್ವ ಗುಣ ಬೆಳೆಯಬೇಕು ಎಂದು ಒತ್ತು ನೀಡುತ್ತಿದ್ದರು. ಒಂದು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ನನ್ನಲ್ಲಿ, ಆ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂತ್ರಿಯಾಗಬಹುದು ಎನ್ನುವ ಭರವಸೆ ಮೂಡಿತ್ತು ಎಂದರು.
ಡಿಸಿಎಂ ಆದ ನಂತರ ಮೊದಲ ಸಹಿ ಹಾಕಿದ್ದು ರಾಜೀವ್ ಗಾಂಧಿ ಪ್ರತಿಮೆಗೆ
ರಾಜೀವ್ ಗಾಂಧಿ ಅವರ ಬಗ್ಗೆ ಇಡೀ ದಿನ ಮಾತನಾಡಬಹುದು. ನಾನು ಡಿಸಿಎಂ ಆದ ತಕ್ಷಣ ರಾಜೀವ್ ಗಾಂಧಿ ಅವರ ಹಳೆಯ ಪ್ರತಿಮೆ ಬದಲು ಮಾಡಿ ಹೊಸ ಪ್ರತಿಮೆ ಸ್ಥಾಪನೆಗೆ ಮೊದಲು ಸಹಿ ಮಾಡಿದೆ. ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಈ ಹಿಂದೆ ಸ್ಥಾಪನೆ ಮಾಡಲಾಗಿತ್ತು. ಪ್ರಸ್ಥುತ ಈ ಕೇಂದ್ರಗಳು ಕಾರಣಾಂತರಗಳಿಂದ ಸೊರಗಿವೆ. ಇವನ್ನು ಪುನರುಜ್ಜೀವನಗೊಳಿಸಲಾಗುವುದು ಎಂದರು.
ರಾಜೀವ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಯುವ ಕಾಂಗ್ರೆಸ್ ಅಧ್ಯಕ್ಷ ಜಾರ್ಜ್ ಅವರ ಜೀಪನ್ನು ಹತ್ತಿದರೇ ವಿನಃ ಎಫ್.ಎಂ. ಖಾನ್ ಅವರ ಕಾರನ್ನು ಹತ್ತಲಿಲ್ಲ. ಯುವಕರ ಬಗ್ಗೆ ಅವರಿಗಿದ್ದ ಪ್ರೀತಿಗೆ ಇದು ಸಾಕ್ಷಿ ಎಂದರು.
ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಜಯಪ್ರಕಾಶ್ ನಾರಾಯಣ್ ತರಬೇತಿ ಸಂಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಸುಧಾರಣೆಗೆ 73, 74 ನೇ ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ರಾಜೀವ್ ಗಾಂಧಿ ಅವರು “ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೂ ನಾಯಕತ್ವ ಬೆಳೆಯಬೇಕು. We create leaders, not followers” ಎಂದು ತಿದ್ದುಪಡಿಯ ಪರವಾಗಿ ಮಾತನಾಡಿದರು ಎಂದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಎಸ್ಐಟಿ ಮನವಿ
ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರ ಸ್ಮಾರಕ ನಿರ್ಮಾಣಕ್ಕೆ ಕನಕಪುರದ ಕಲ್ಲನ್ನು ಬಳಸಲಾಗಿದೆ. ಈ ಸೇವೆ ಮಾಡಲು ಸೋನಿಯಾ ಗಾಂಧಿ ಅವರು ನನಗೆ ಅವಕಾಶ ನೀಡಿದರು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧವೇ ನನಗೂ ಗಾಂಧಿ ಕುಟುಂಬಕ್ಕೂ ಇರುವುದು ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.