ಜನಾರ್ಧನ್ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ, ಡಿಕೆಶಿ ಹೇಳಿದ್ದೇನು ಗೊತ್ತೇ?

ಇಂದು ಕ್ರಿಸ್ ಮಸ್ ಹಬ್ಬವಾಗಿದ್ದು, ನಾನು ಕಂಡಂತೆ ಎಲ್ಲಾ ಜಾತಿ, ಧರ್ಮದವರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷನಾಗಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ ಶುಭ ಕೋರಿ, ಅವರ ಆಶೀರ್ವಾದ ಪಡೆದಿದ್ದೇನೆ.

Written by - Zee Kannada News Desk | Last Updated : Dec 25, 2022, 06:55 PM IST
  • ನಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಕೇಸ್ ಹಾಕಿ ಪಾದಯಾತ್ರೆ ನಿಲ್ಲಿಸಿದ್ದರು.
  • ಆಗ ದಿನನಿತ್ಯ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
  • ಯಾರಿಗೆ ಸೋಂಕು ತಗುಲಿತ್ತು. ಈಗ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು,
ಜನಾರ್ಧನ್ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ, ಡಿಕೆಶಿ ಹೇಳಿದ್ದೇನು ಗೊತ್ತೇ? title=
screengrab

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಪಕ್ಷ ಸ್ಥಾಪಿಸಿರುವುದಕ್ಕೆ ಡಿ.ಕೆ.ಶಿವಕುಮಾರ ಸ್ವಾಗತಿಸಿದ್ದಾರೆ.

ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಶುಭಕೋರಿ ಮಾತನಾಡುತ್ತಿದ್ದರು.

ಇಂದು ಕ್ರಿಸ್ ಮಸ್ ಹಬ್ಬವಾಗಿದ್ದು, ನಾನು ಕಂಡಂತೆ ಎಲ್ಲಾ ಜಾತಿ, ಧರ್ಮದವರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷನಾಗಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ ಶುಭ ಕೋರಿ, ಅವರ ಆಶೀರ್ವಾದ ಪಡೆದಿದ್ದೇನೆ.

ಈ ಸಮಾಜಕ್ಕೆ ಕ್ರೈಸ್ತ ಸಮುದಾಯದ ಸೇವೆ ಗಣನೀಯವಾಗಿದೆ. ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಈ ಸಮುದಾಯ ತನ್ನ lದೇ ಆದ ಛಾಪು ಮೂಡಿಸಿದೆ. ಈ ಹಿಂದೆ ಕ್ರೈಸ್ತ ಸಮುದಾಯದ ಆಸ್ಪತ್ರೆಗಳು ಹೆಚ್ಚಾಗಿದ್ದವು. ಬೆಂಗಳೂರಿನಲ್ಲಿ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ.

ಇದನ್ನೂ ಓದಿ:ಎಲ್ಲಾ ಕ್ಷೇತ್ರದಲ್ಲೂ ದಿವ್ಯಾಂಗರಿಗೆ ಪ್ರೋತ್ಸಾಹಿಸಿ: ರಾಜ್ಯಪಾಲರ ಕರೆ

ನೀವು ಕ್ರಿಸ್ ಮಸ್ ಹಬ್ಬ ಆಚರಿಸಿದ ನೆನಪುಗಳಿವೆಯೇ ಎಂಬ ಪ್ರಶ್ನೆಗೆ, ' ಅನೇಕ ನೆನಪುಗಳಿವೆ. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ನನ್ನಿಂದ ನೃತ್ಯ ಮಾಡಿಸಿದ್ದರು. ನಾನು ಬೆಂಗಳೂರಿಗೆ ಬರುವ ಮುನ್ನ ಕನಕಪುರದ ಕ್ರೈಸ್ತ ಶಾಲೆಯಲ್ಲಿ ಒಂದು ವರ್ಷ ಓದಿದ್ದೆ. ಈ ಹಬ್ಬದ ಆಚರಣೆ ಮಾಡಿದ ನೆನಪು ಇದೆ ' ಎಂದು ತಿಳಿಸಿದರು.

ಜನಾರ್ದನರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ' ಅವರಿಗೆ ಶುಭವಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಬೆಳೆಯಬೇಕು. ಅವರು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ. ಅವರು ಸಾಧ್ಯವಾದಷ್ಟು ಜನ ಸೇವೆ ಮಾಡಲಿ. ಈ ಸಮಯದಲ್ಲಿ ಟೀಕೆ ಮಾಡುವ ಪ್ರವೃತ್ತಿ ನನ್ನದಲ್ಲ. ಒಳ್ಳೆಯ ಕೆಲಸ ಮಾಡಲು ಯಾರೇ ಮುಂದೆ ಬಂದರೂ ನಾವು ಅಭಿನಂದಿಸುತ್ತೇವೆ ' ಎಂದು ತಿಳಿಸಿದರು.

ಕೇಂದ್ರದ ಬಿಜೆಪಿ ನಾಯಕರನ್ನು ಕಠೋರವಾಗಿ ನಿಂದಿಸಿ, ಯಡಿಯೂರಪ್ಪ ಅವರನ್ನು ಹೊಗಳಿ ಪಕ್ಷ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದಾಗ, 'ಅದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ನಾವು ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹಾಗೂ ಜಾತ್ಯಾತೀತ ತತ್ವಕ್ಕೆ ಬೆಲೆ ಕೊಡುವವರನ್ನು ಗೌರವಿಸುತ್ತೇವೆ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತೇವೆ' ಎಂದು ತಿಳಿಸಿದರು.

ಹೊಸ ಪಕ್ಷ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡುವುದೇ ಎಂದು ಕೇಳಿದಾಗ, 'ಅವರು ಇಂದು ಪಕ್ಷದ ಘೋಷಣೆ ಮಾಡಿದ್ದಾರೆ.  ಒಂದು ಗಿಡ ಮರವಾಗಲು ಸಾಕಷ್ಟು ಸಮಯಬೇಕು. ಅವರಿಗೆ ಒಳ್ಳೆಯದಾಗಲಿ ' ಎಂದು ತಿಳಿಸಿದರು.

ಇದನ್ನೂ ಓದಿ: ಕ್ರಿಸ್ಮಸ್ ಸಂಭ್ರಮದಲ್ಲಿ ಚರ್ಚ್‌ಗೆ ತೆರಳುತ್ತಿದ್ದ ಯುವಕ ಮಸಣಕ್ಕೆ..! 

ಸೂರತ್ ಕಲ್ ನಲ್ಲಿ ಮುಸ್ಲಿಂ ಯುವಕನ ಹತ್ಯೆಗೆ ಸಿಎಂ ಅವರ 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ' ಎಂಬ ಹೇಳಿಕೆ ಕಾರಣವೇ ಎಂಬ ಪ್ರಶ್ನೆಗೆ, 'ಮುಖ್ಯಮಂತ್ರಿಗಳು ತಾನು ಸಿಎಂ ಎಂಬುದನ್ನು ಮರೆತಿದ್ದಾರೆ. ಸಿಎಂ ಆದವರು ರಾಜ್ಯಕ್ಕೆ ಸಿಎಂ ಆಗುತ್ತಾರೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುವುದಾದರೆ ಇವರು ಯಾಕೆ ಇರಬೇಕು? ಎಲ್ಲರಿಗೂ ರಕ್ಷಣೆ ನೀಡಬೇಕಾಗಿರುವುದು ಅವರ ಕರ್ತವ್ಯ. ಯಾವ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದೆ. ಇವರು ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡುವ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಹೆಸರಲ್ಲಿ ಮಾಡಿರುವ ಪ್ರಮಾಣಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಈ ಪರಿಸ್ಥಿತಿಯಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ. ಆರ್ಥಿಕ ಸಂಕಷ್ಟ ಹೆಚ್ಚುತ್ತಿದ್ದು, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಇದಕ್ಕೆಲ್ಲ ಸಿಎಂ ಅವರೇ ಕಾರಣ. ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಸಮವಸ್ತ್ರ ತ್ಯಜಿಸಿ ಕೇಸರಿ ಬಟ್ಟೆ ಹಾಕಿಕೊಂಡು ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಸಮರ್ಥಿಸಿಕೊಂಡು ಮುಖ್ಯಮಂತ್ರಿಗಳು ಬಹಳ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಇದು ರಾಜ್ಯಕ್ಕೆ ದೊಡ್ಡ ಅಪಮಾನ. ಇದನ್ನು ನಿಯಂತ್ರಿಸುವ ಸಾಮರ್ಥ್ಯವಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು. ಜನರ ಪ್ರಾಣ ತೆಗೆದುಕೊಳ್ಳಬಾರದು ' ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಫೆಬ್ರವರಿ, ಮಾರ್ಚ್ ನಲ್ಲಿ ಕೋವಿಡ್ ಹೆಚ್ಚಾಗುತ್ತಿದೆ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ' ಇವರೇನು ಭವಿಷ್ಯ ಹೇಳುವವರಲ್ಲ. ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಕೋವಿಡ್ ಎಂದರು. ಆದರೆ ಯಾರಿಗೆ ಸೋಂಕು ತಗುಲಿ ಸತ್ತರು. ನಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಕೇಸ್ ಹಾಕಿ ಪಾದಯಾತ್ರೆ ನಿಲ್ಲಿಸಿದ್ದರು. ಆಗ ದಿನನಿತ್ಯ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾರಿಗೆ ಸೋಂಕು ತಗುಲಿತ್ತು. ಈಗ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು, ಅವರಿಗೆ ಸಿಗುತ್ತಿರುವ ಜನ ಬೆಂಬಲವನ್ನು ಸಹಿಸಲು ಬಿಜೆಪಿ ಅವರಿಗೆ ಸಾಧ್ಯವಾಗುತ್ತಿಲ್ಲ. ಈಗ ಕೆಲವು ಕಡೆ ಇರಬಹುದು. ಬಿಜೆಪಿ ನಾಯಕರ ಕಾರ್ಯಕ್ರಮ ಹೇಗೆ ನಡೆಯುತ್ತಿದೆ? ಅವರ ನಾಯಕರು ರಾಜ್ಯಕ್ಕೆ ಬರುತ್ತಿಲ್ಲವೇ? ಕಾರ್ಯಕ್ರಮ ಮಾಡುತ್ತಿಲ್ಲವೇ? ಮೊದಲು ಅವರ ಕಾರ್ಯಕ್ರಮ ನಿಲ್ಲಿಸಲಿ. ಸುಮ್ಮನೆ ಆರ್ಥಿಕತೆ ಹಾಳು ಮಾಡಿ, ನಿರುದ್ಯೋಗ ಹೆಚ್ಚಿಸುತ್ತಿದ್ದಾರೆ. ಜನರನ್ನು ಸುಮ್ಮನೆ ಹೆದರಿಸುತ್ತಾರೆ' ಎಂದು ತಿಳಿಸಿದರು.

ಇದನ್ನೂ ಓದಿ: ʼರೆಡ್ಡಿ ಅಡ್ಜಸ್ಟ್‌ಮೆಂಟ್‌ ಮಾಡಿಕೊಳ್ಳುವ ವ್ಯಕ್ತಿ ಅಲ್ಲʼ : ಬಿಜೆಪಿ ವಿರುದ್ಧ ತೊಡೆತಟ್ಟಿದ ಗಣಿ ಧಣಿ

ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ನಿಯಂತ್ರಿಸಲು ಈ ರೀತಿ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, 'ನಾವು ಬಸ್ ಯಾತ್ರೆ ಮಾಡಿಯೇ ಮಾಡುತ್ತೇವೆ. ನಮ್ಮ ಯಾತ್ರೆ ಪಾಂಚಜನ್ಯ 2.0 ಆಗಲಿದೆ. ನಾವು ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಿಸುವುದಿಲ್ಲ. ಡಿ. 30 ರಂದು ಕೃಷ್ಣಾ ನದಿ ನೀರು ವಿಚಾರವಾಗಿ ವಿಜಯಪುರದಲ್ಲಿ ಪ್ರತಿಭಟನೆ ಇದೆ. ಜ.2 ರಂದು ಮಹದಾಯಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಹೋರಾಟ ಮಾಡಲಾಗುವುದು. 8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶ ನಡೆಯಲಿದೆ. ನಂತರ ನಾವು ಬೆಳಗಾವಿಯಿಂದ ಬಸ್ ಯಾತ್ರೆ ಮಾಡುತ್ತೇವೆ. ಇದನ್ನು ಯಾರಿಂದಲೂ ನಿಲಿಸಲು ಸಾಧ್ಯವಿಲ್ಲ. ನಿಲ್ಲಿಸಿದರೆ, ನಿಲ್ಲಿಸಲಿ. ಜನ ಇದ್ದಾರೆ. ಅವರ ಮುಂದೆ ಹೋಗುತ್ತೇವೆ. ಇವರು ಮಾಡಿರುವ ಅಕ್ರಮ, ಅನ್ಯಾಯ, ಲೂಟಿಯನ್ನು ಜನ ನೋಡಿದ್ದಾರೆ. ಅದನ್ನು ಅವರ ಮುಂದೆ ಇಡುತ್ತೇವೆ. ನಿನ್ನೆ ಕೆಂಪಣ್ಣ ಅವರನ್ನು ಬಂಧಿಸಿದ್ದಾರೆ.

ನಾನು ಕೂಡ ಯತ್ನಾಳ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಇದುವರೆಗೂ ನನಗೆ ನೊಟೀಸ್ ಬಂದಿಲ್ಲ. ಆದರೆ ಕೆಂಪಣ್ಣ ಅವರ ವಿಚಾರದಲ್ಲಿ ಸತ್ಯ ಹೇಳಿದ್ದಕ್ಕೆ ವಾರೆಂಟ್ ಹೊರಡಿಸಿ ಬಂಧಿಸಿದ್ದಾರೆ. ರಾಜ್ಯದ ಗುತ್ತಿಗೆದಾರರು ಈ ವಿಚಾರದಲ್ಲಿ ಜಾಗರೂಕರಾಗಿರಿ. ಇದು ಕೇವಲ ಕೆಂಪಣ್ಣ ಒಬ್ಬರ ಮೇಲಿನ ದೌರ್ಜನ್ಯ ಅಲ್ಲ. ಗುತ್ತಿಗೆದಾರರಿಗೆ ದಿನನಿತ್ಯ ಆಗುತ್ತಿರುವ ಕಿರುಕುಳ. ಈ ಸರ್ಕಾರವನ್ನು ಕಿತ್ತೊಗೆಯಲು ಭ್ರಷ್ಟಾಚಾರದ ಮಾಹಿತಿ ಒದಗಿಸಿಕೊಡಬೇಕು. ಭ್ರಷ್ಟಾಚಾರ ವಿಚಾರವಾಗಿ ಪ್ರತಾಪ್ ಸಿಂಹ ಹಾಗೂ ಶ್ರೀನಿವಾಸ್ ಪ್ರಸಾದ್ ನೀಡಿದ ಹೇಳಿಕೆ ವಿಚಾರವಾಗಿ ಅವರಿಗೆ ಯಾಕೆ ನೊಟೀಸ್ ನೀಡಿಲ್ಲ. ಅವರಿಬ್ಬರೂ ಸಂಸದರು. ಚುನಾವಣೆಯಲ್ಲಿ 15 ಕೋಟಿ ನೀಡಲಾಗಿದೆ, ಉಪಕುಲಪತಿಗಳ ಹುದ್ದೆಗೆ 5-6 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಯಾಕೆ ವಿಚಾರಣೆ ಇಲ್ಲ? ಇದು ಹಿರಿಯ ಹಾಗೂ ಪ್ರಜ್ಞಾವಂತ ಸಂಸದರ ಹೇಳಿಕೆಯಾಗಿದೆ. ಇದನ್ನು ಲೋಕಾಯುಕ್ತ, ಇಡಿ, ಐಟಿ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಮಾಡಬೇಕು. ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News