ಬೆಳಗಾವಿ : ಸಿಬಿಐ ಅಧಿಕಾರಿಗಳು ಇಂದು ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ ಅವರು ಯಾವ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಶಿಕ್ಷಣ ಸಂಸ್ಥೆಗಳ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಅವರಿಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದರು. ಅವರಿಗೆ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡಲಿ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಚುನಾವಣೆ ಸಮಯದಲ್ಲಿ ಪದೇ ಪದೆ ನೊಟೀಸ್ ನೀಡಿ, ದಾಳಿ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದಾಗ, ‘ನಾನು ಕೆಲವು ತಿಂಗಳ ಹಿಂದೆಯೇ ಕಾಗದ ಬರೆದು ಈ ಪ್ರಕರಣದಲ್ಲಿ ಎಫ್ಐಆರ್ ಹಾಕಿ 2 ವರ್ಷ ಆಗಿದೆ. ನೀವು ಯಾವುದೇ ತನಿಖೆ ಮಾಡಿಲ್ಲ. ನಿಮಗೆ ಯಾವುದೇ ಸ್ಪಷ್ಟತೆ ಬೇಕಿದ್ದರೂ ಕೇಳಿ, ನಾನು ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದ್ದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆ. ಈ ಪ್ರಕರಣವನ್ನು ಸ್ಥಳೀಯ ತನಿಖಾ ಸಂಸ್ಥೆಗಳ ಮೂಲಕವೇ ತನಿಖೆ ಮಾಡಿಸಬಹುದು. ಇದೇನು ವಿಶೇಷ ಪ್ರಕರಣವಲ್ಲ ಎಂಬ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ನಾನು ನ್ಯಾಯಾಲಯಕ್ಕೆ ತಿಳಿಸಿದ್ದೆ. ಆದರೂ ರಾಜಕೀಯ ಒತ್ತಡದಿಂದ ಸಿಬಿಐಗೆ ನೀಡಿದ್ದರು. ಈಗಲೂ ತೊಂದರೆ ನೀಡಬೇಕು ಎಂದು ತೀರ್ಮಾನಿಸಿದ್ದಾರೆ. ಅದರಲ್ಲಿ ಅನುಮಾನವಿಲ್ಲ.ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಸಮಯಾವಕಾಶ ಕೇಳಿದ್ದೆ. ಆದರೂ ಪಟ್ಟು ಹಿಡಿದು ವಿಚಾರಣೆಗೆ ಕರೆದರು. ನನ್ನ ಜತೆ ವ್ಯವಹಾರ ಮಾಡಿರುವವರಿಗೂ ತೊಂದರೆ ನೀಡುತ್ತಿದ್ದಾರೆ. ಈ ರಾಜ್ಯದಲ್ಲಿ ಯಾವುದೇ ಉದ್ಯಮಿ ಅಥವಾ ರಾಜಕಾರಣಿ ಅವರ ಕೈಗೆ ಸಿಕ್ಕಿಲ್ಲ. ನಾವು ಮಾತ್ರ ಸಿಕ್ಕಿದ್ದೇವೆ. ಏನು ಮಾಡಬೇಕೋ ಅದನ್ನು ಮಾಡಿ, ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಒಂದು ರೌಂಡ್ ಕಳುಹಿಸಿದ್ದಾರೆ. ಈಗ ಮತ್ತೊಂದು ಬಾರಿ ಕಳುಹಿಸಲು ಏನೆಲ್ಲಾ ಮಾಡಬೇಕೋ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ನಾನು ಯಾರಿಗಾದರೂ ಮೋಸ ಮಾಡಿ, ತೊಂದರೆ ಕೊಟ್ಟಿದ್ದರೆ, ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನನ್ನ ಬದುಕು, ವ್ಯವಹಾರ, ಶಿಕ್ಷಣ ಸಂಸ್ಥೆ, ರಾಜಕೀಯ ಬದುಕು ಎಲ್ಲವೂ ಪಾರದರ್ಶಕವಾಗಿದೆ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ತನಿಖೆ ನಡೆದಿಲ್ಲ. ಇಂಧನ ಸಚಿವನಾಗಿದ್ದಾಗಲೂ ಒಂದೂ ಅಕ್ರಮ ನಡೆಸಿಲ್ಲ. ಆದರೂ ನನ್ನ ಮೇಲೆ ಅಕ್ರಮ ಆಸ್ತಿ ಸಂಪಾದನೆ ಎಂದು ಹೇಗೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ತನಿಖೆಗೆ ನೀಡಿ 3 ವರ್ಷ ಆಗಿದೆ. ಇಷ್ಟು ಹೊತ್ತಿಗೆ ಎಲ್ಲ ತನಿಖೆ ಮಾಡಿ, ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳಬಹುದಿತ್ತಲ್ಲವೇ? ಆದರೆ ಯಾವುದೂ ಆಗಿಲ್ಲ’ ಎಂದರು.
ಪದೇ ಪದೆ ದಾಳಿಯಿಂದ ವಿಚಲಿತರಾಗಿದ್ದೀರಾ ಎಂದು ಕೇಳಿದಾಗ, ‘ಮನಸಿಗೆ ಬಹಳ ನೋವಾಗುತ್ತದೆ. ನನಗಿಂತ ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದ ಜನರಿಗೆ ತೊಂದರೆ ನೀಡುತ್ತಿರುವುದು ನೋವು ತಂದಿದೆ. ಒಬ್ಬ ವಕೀಲರಿಗೆ 5 ಲಕ್ಷ ಶುಲ್ಕ ನೀಡಿದ್ದೆ. ಅವರಿಗೆ ಸಮನ್ಸ್ ನೀಡಿದ್ದಾರೆ. ನಾನು ಪ್ರವಾಸಕ್ಕೆ ನನ್ನ ಸ್ನೇಹಿತನನ್ನು ಅಮೆರಿಕಕ್ಕೆ ಕಳುಹಿಸಿದ್ದೆ. ಆ ಟ್ರಾವೆಲ್ ಏಜೆಂಟ್ ಗೆ ನೊಟೀಸ್ ನೀಡಿದ್ದಾರೆ. ಇನ್ನು ಎಷ್ಟು ಜನಕ್ಕೆ ನೋಟೀಸ್ ನೀಡಿದ್ದಾರೆ ಎಂಬುದರ ಬಗ್ಗೆ ಪಟ್ಟಿ ನೀಡಲು ಹೋಗುವುದಿಲ್ಲ’ ಎಂದರು.
ಇದನ್ನೂ ಓದಿ: ನನಗೆ ಇರೋದು ಒಬ್ಬಳೇ ಹೆಂಡತಿ: ಸಾಕು ಮಗನ ಸಂಸಾರದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ..!
ಸಿಬಿಐ ಸ್ವಾಯತ್ತ ಸಂಸ್ಥೆ, ಅದು ಅದರ ಕೆಲಸ ಮಾಡುತ್ತಿದೆ. ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಏನಾದರೂ ಹೇಳಲಿ. ಅವರ ಮಂತ್ರಿಗಳು, ನಾಯಕರ ಮೇಲೂ ಇಂತಹದೇ ಪ್ರಕರಣಗಳಿವೆ. ಅವರ ಪ್ರಕರಣಗಳನ್ನು ಸಿಬಿಐಗೆ ಯಾಕೆ ನೀಡಿಲ್ಲ. ಸ್ಪೀಕರ್ ಅವರ ಕಚೇರಿಗೆ ಪತ್ರ ಬರೆದಿದ್ದಾರೆ. ಮೊನ್ನೆ ಸಂಸದ ಶ್ರೀನಿವಾಸ್ ಪ್ರಸಾದ್ ಹಣದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಹಿಂದೆಯೂ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ ವಿವಿ ಕುಲಪತಿ ಹುದ್ದೆಗೆ 3-5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಕುಲಪತಿಗಳನ್ನು ನೇಮಕ ಮಾಡುವ ರಾಜ್ಯಪಾಲರ ಕಚೇರಿ ಮೇಲೆ ಸಂಸದರು ಇಂತಹ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಬೊಮ್ಮಾಯಿ ಅವರು ಸಿಬಿಐ ಅಥವಾ ಇಡಿ ತನಿಖೆಗೆ ಯಾಕೆ ನೀಡಿಲ್ಲ? ಸಂಸದ ನೇರವಾಗಿ ಹೇಳಿದ್ದಾರೆ. ಈ ಹಿಂದೆ ವಿಸಿ ಆಗಲು ಪ್ರೋಫೆಸರ್ ಒಬ್ಬರು ಹಣ ನೀಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಯಾಕೆ ತನಿಖೆ ನಡೆದಿಲ್ಲ’ ಎಂದು ಪ್ರಶ್ನಿಸಿದರು.
ಅವರ ಕಣ್ಣಿಗೆ ಕೇವಲ ನೀವೋಬ್ಬರೇ ಆಸ್ತಿ ಮಾಡಿರುವುದಾಗಿ ಕಾಣುತ್ತಿದೆಯೇ ಎಂದು ಕೇಳಿದಾಗ, ‘ನನ್ನ ವಿಚಾರವನ್ನು ನಾನು ಜೈಲಿಗೆ ಬಂದ ದಿನವೇ ಹೇಳಿದ್ದೇನೆ. ಏನು ಹೇಳಿದ್ದೇನೆ ಎಂದು ನೀವೇ ಅದನ್ನು ತೆಗೆದು ನೋಡಿ’ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.