ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ..!

ವಕೀಲೆ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಸೇರಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದಾರೆ.

Written by - Zee Kannada News Desk | Last Updated : May 14, 2022, 06:52 PM IST
  • ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿತ
  • ಬಾಗಲಕೋಟೆಯಲ್ಲಿ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿದ ಕಾಂಗ್ರೆಸ್ ಮುಖಂಡರು
  • ಸದ್ಯ ಆರೋಪಿ ಬಂಧಿಸಿರುವ ಬಾಗಲಕೋಟೆ ನಗರ ಠಾಣೆ ಪೊಲೀಸರಿಂದ ವಿಚಾರಣೆ
ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ..!   title=
ವಕೀಲೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿತ

ಬಾಗಲಕೋಟೆ: ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯ ವಿನಾಯಕನಗರ ಕ್ರಾಸ್‍ನಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತನೇ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪ್ರಕರಣ ಸಂಬಂಧ ಬಾಗಲಕೋಟೆ ನಗರ ಠಾಣೆ ಪೊಲೀಸರು ಆರೋಪಿ ಮಹಾಂತೇಶ್‍ನನ್ನು ಬಂಧಿಸಿದ್ದಾರೆ. ಮಹಿಳೆ ಎಂಬುದನ್ನೂ ನೋಡದೆ ಜನರ ಎದುರೇ ವಕೀಲೆಗೆ ಜಾಡಿಸಿ ಒದ್ದು ಆರೋಪಿ ಹಲ್ಲೆ ನಡೆಸಿದ್ದ. ಪರಿಣಾಮ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಕೀಲೆ ಮೇಲೆ ನಡುರಸ್ತೆಯಲ್ಲಿ ಮೃಗೀಯವಾಗಿ ವರ್ತಿಸಿ ಹಲ್ಲೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪಿ ಮಹಾಂತೇಶ್‍ನ ಮೃಗೀಯ ವರ್ತನೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಈ ಬಗ್ಗೆ ವಕೀಲೆ ಸಂಗೀತಾ ದೂರು ನೀಡಿದ್ದು, ಆರೋಪಿ ಮಹಾಂತೇಶ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

ಇದನ್ನೂ ಓದಿ: ಹುಡುಗಿ ಮನೆಯವರು ಒಪ್ಪಿದ್ರೆ ಮದುವೆ ಆಗ್ತಿನಿ: ಆ್ಯಸಿಡ್ ನಾಗ

ವಕೀಲೆ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದಾರೆ. ಮಾಜಿ ಸಚಿವ ಎಚ್.ವೈ.ಮೇಟಿ ಸೇರಿ ಹಲವು ಮುಖಂಡರು ಭೇಟಿ ನೀಡಿದ್ದು ಹಲ್ಲೆ ನಡೆಸಿರುವುದನ್ನು ಖಂಡಿಸಿದ್ದಾರೆ. ವಕೀಲೆ ಸಂಗೀತಾ ಹಾಗೂ ಅವರ ಪತಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.   

ಮಹಾಂತೇಶ್‍ ಗಿಫ್ಟ್ ಸೆಂಟರ್ ನಲ್ಲಿ ಸಂಗೀತಾ ಗಲಾಟೆ!

ಹಲ್ಲೆಗೊಳಗಾಗಿರುವ ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿ ಮಹಾಂತೇಶ್‍ ಚೊಳಚಗುಡ್ಡನಿಗೆ ಸೇರಿದ ಗಿಫ್ಟ್ ಸೆಂಟರ್ ನಲ್ಲಿ ಗಲಾಟೆ ಮಾಡಿರುವುದು ತಿಳಿದುಬಂದಿದೆ. ಹಲ್ಲೆಗೂ ಮೊದಲು ಮೈದುನನ ಸಮೇತ ಬಂದಿದ್ದ ಸಂಗೀತಾ, ಮಹಾಂತೇಶ್‍ ಅವರ ಗಿಫ್ಟ್ ಸೆಂಟರ್ ಗೆ ನುಗ್ಗಿಬಂದು ದರ್ಪ ತೋರಿದ್ದರು. ಗಿಫ್ಟ್ ಸೆಂಟರ್ ಗೆ ಬಂದು ಸಂಗೀತಾ ಅಲ್ಲಿನ ಸಾಮಾನುಗಳನ್ನು ಎಳೆದಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವಕೀಲೆ ಮೇಲೆ ಮಹಾಂತೇಶ್‍ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಕಲರ್‌ ಕಲರ್‌ ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ನಾರುತ್ತಿದ್ದ ಮೃತದೇಹ!

ನಾನೂ ದೂರು ನೀಡುತ್ತೇನೆ

ಇನ್ನು ಹಲ್ಲೆ ವಿಚಾರವಾಗಿ ಮಾತನಾಡಿರುವ ಆರೋಪಿ ಮಹಾಂತೇಶ್, ‘ನಿನ್ನೆ(ಶುಕ್ರವಾರ) ಪೊಲೀಸರು ಬಂದು ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದು ಕೇಳಿದ್ದರು. ನಮ್ಮ ಮನೆ ಹತ್ತಿರವೇ ಅವರ ಮನೆ ಇದ್ದಿದ್ದರಿಂದ ಪೊಲೀಸರಿಗೆ ತೋರಿಸಿದ್ದೆ. ಇದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು. ನಾನೂ ಕೂಡ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News