ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಯಾವುದೇ ಆತಂಕವೂ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಗುರುವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ, ಬಿಜೆಪಿ ಅವರು ಸರ್ಕಾರ ಬೀಳಲಿದೆ ಎಂದು ಸುಮ್ಮನೆ ಮಾತಾಡುತ್ತಿದ್ದಾರೆ ಅಷ್ಟೆ. ಸರ್ಕಾರ ಬಿದ್ದು ಹೋಗುವ ಬಗ್ಗೆ ಯಾವುದೇ ಆತಂಕ ಇಲ್ಲ. ಇಂದು ಸಿಎಂ ಜೊತೆ ಬರಗಾಲದ ಬಗ್ಗೆಯಷ್ಟೆ ನಾವು ಚರ್ಚೆ ಮಾಡಿದ್ದೇವೆ. ಸರ್ಕಾರ ಬೀಳುವುದೂ ಇಲ್ಲ, ಹೀಗಾಗಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಹಿನ್ನಲೆಯಲ್ಲಿ ಆಡಳಿತ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಡಳಿತ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಚುನಾವಣೆ ಆಯೋಗಕ್ಕೆ ನೀತಿ ಸಂಹಿತೆ ಸಡಿಲ ಮಾಡಲು ಮನವಿ ಮಾಡುವಂತೆ ಇಂದು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಚುನಾವಣೆ ಆಯೋಗಕ್ಕೆ ನೀತಿ ಸಂಹಿತೆ ಸಡಿಲ ಮಾಡಿ ಆಡಳಿತ ಮಾಡಲು ಅವಕಾಶ ಕೊಡುವಂತೆ ಮನವಿ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.