ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ

ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಯಲು ನೆರವಾಗುವುದು ಗ್ರಾಮ ವಾಸ್ತವ್ಯ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  

Last Updated : Jun 3, 2019, 09:54 AM IST
ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ title=
File Image

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷದ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಯಲು ಗ್ರಾಮ ವಾಸ್ತವ್ಯ ನೆರವಾಗುವುದು ಎಂದು ಸಿಎಂ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಗ್ರಾಮ ವಾಸ್ತವ್ಯದಲ್ಲಿ ಅವರು ಮನೆಗಳಲ್ಲಿ ವಾಸ್ತವ್ಯ ಹೂಡುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಕುರಿತ ಕೆಲವು ಅಂಶಗಳು:

ಗ್ರಾಮ ವಾಸ್ತವ್ಯದ ಹಿನ್ನೆಲೆ ಕುಮಾರಸ್ವಾಮಿಯವರ ಮೊತ್ತಮೊದಲ ಗ್ರಾಮವಾಸ್ತವ್ಯ ಅಥಣಿ ತಾಲೂಕಿನ ಪಿ.ಕೆ ನಾಗನೂರೆಂಬ ಹಳ್ಳಿಯಿಂದ ಆರಂಭವಾಯಿತು. ಕೃಷ್ಣೆಯಲ್ಲಿ ಪ್ರವಾಹ ಬಂದಾಗ ಪರಿಸ್ಥಿತಿ ಅವಲೋಕಿಸಲು ತೆರಳಿದ ಮುಖ್ಯಮಂತ್ರಿಗಳಿಗೆ ಸಂಜೆ ಆರು ಗಂಟೆಗೆ ಬೆಳಗಾವಿಗೆ ಹೊರಡಲು ಹೆಲಿಕಾಪ್ಟರ್ ಹೊರಡಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಅವಸರಿಸುತ್ತಿದ್ದರು. ಮುಖ್ಯಮಂತ್ರಿಗಳು ಕಾರಣ ಕೇಳಿದಾಗ ಇಲ್ಲೆಲ್ಲೂ ತಂಗಲು ಸ್ಥಳವಿಲ್ಲವಾದ್ದರಿಂದ ಬೆಳಗಾವಿಗೆ ಹೊರಡುವುದು ಅನಿವಾರ್ಯವೆಂದರು. ಆಗ ಮುಖ್ಯಮಂತ್ರಿಗಳು ಇಲ್ಲೇ ಹತ್ತಿರ ಯಾರ ಮನೆಯಲ್ಲಾದರೂ ತಂಗುವ ಎಂದು ಪ್ರತಿಕ್ರಿಯಿಸಿದರು.

ಸ್ಥಳದಲ್ಲೇ ಉಪಸ್ಥಿತರಿದ್ದ ಶಾಸಕರು ನಾಗನೂರಿನಲ್ಲೊಂದು ಮಠದಲ್ಲಿ ತಂಗಲು  ಅವಕಾಶವಿರುವುದಾಗಿ ಹೇಳಿದರು. ಬಳಿಕ ನೆರೆ ಬಂದ  ಕೃಷ್ಣೆಯನ್ನು ಮೂರು ಟ್ರ್ಯಾಕ್ಟರ್‍ಗಳಲ್ಲಿ ದಾಟಿ ನಾಗನೂರಿಗೆ ಬಂದು ಮಠದಲ್ಲಿ ವಾಸ್ತವ್ಯ ಹೂಡಿದ್ದು ಮುಖ್ಯಮಂತ್ರಿಗಳ ಮೊದಲ ಗ್ರಾಮ ವಾಸ್ತವ್ಯ. 

ಅಂದು ಊರ ಜನರೊಂದಿಗೆ ಇದ್ದು ಅಲ್ಲಿನವರೊಂದಿಗೆ ಬೆರೆತು ಅಲ್ಲಿನ ಜನರ ಕಷ್ಟಸುಖಗಳ ಪರಿಚಯವನ್ನು ಮುಖ್ಯಮಂತ್ರಿಗಳು ಮಾಡಿಕೊಂಡದ್ದು ಇತಿಹಾಸ. 

ಈ ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದ್ದಾಗ 20 ತಿಂಗಳ ಆಡಳಿತಾವಧಿಯಲ್ಲಿ  ಮುಖ್ಯಮಂತ್ರಿಗಳು ತಮ್ಮ 47 ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಹೆಚ್‍ಐವಿ ಪೀಡಿತರ ಮನೆಯಲ್ಲಿ ವಾಸ್ತವ್ಯ- ರಿಚರ್ಡ್ ಗೇರ್ ಮೆಚ್ಚುಗೆ
ನಂತರದ ದಿನಗಳಲ್ಲಿ ವಿಜಯಪುರದ ಎಚ್ ಐ ವಿ ಪೀಡಿತರೊಬ್ಬರ ಮನೆಯನ್ನು ಆರಿಸಿಕೊಂಡು, ಎಚ್ ಐ ವಿ ಪೀಡಿತರ ಕುರಿತ ಸಮಾಜದ ತಪ್ಪು ನಂಬಿಕೆಗಳನ್ನು ದೂರ ಮಾಡಿದರು. ಈ ಘಟನೆಯನ್ನು ಓದಿದ ಹಾಲಿವುಡ್ ನಟ, ಎಚ್ ಐವಿ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿದ್ದ  ರಿಚರ್ಡ್ ಗೇರ್ ಅವರು ಈ ಘಟನೆಯಿಂದ ಪ್ರಭಾವಿತರಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ಗ್ರಾಮವಾಸ್ತವ್ಯದ ಅಪರೂಪದ ಅನುಭವಗಳಲ್ಲೊಂದಾಗಿ ದಾಖಲಾಯಿತು.

ತಮ್ಮ ಆಡಳಿತಾವಧಿಯ ಅತ್ಯುತ್ತಮ ಅನುಭವಗಳು ಗ್ರಾಮ ವಾಸ್ತವ್ಯದಿಂದ ದೊರೆಯಿತಲ್ಲದೆ ಹಲವು ಯೋಜನೆಗಳನ್ನು ರೂಪಿಸಲು ಪ್ರೇರಣೆಯೂ ದೊರೆತಿದ್ದು ಗ್ರಾಮ ವಾಸ್ತವ್ಯದಿಂದಲೇ ಎಂಬುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅನುಭವ. 

ಕಾರ್ಯಕ್ರಮ ರೂಪಿಸಲು ಗ್ರಾಮ ವಾಸ್ತವ್ಯ ನೆರವು
ಗ್ರಾಮ ವಾಸ್ತವ್ಯದಿಂದಾಗಿ ಸುಮಾರು ಸಾವಿರದಷ್ಟು ಪ್ರೌಢಶಾಲೆಗಳು, ಸುಮಾರು 500 ರಷ್ಟು  ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಕಾರಣವಾಯಿತು. ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಅಂಗವಿಕಲರಿಗೆ ಮಾಸಾಶನ ಸೌಲಭ್ಯಗಳು ಗ್ರಾಮವಾಸ್ತವ್ಯದ ‘ಕೊಡುಗೆ’ಗಳಾಗಿವೆ ಎಂದಿದ್ದಾರೆ.

ಈ ಬಾರಿಯ ಗ್ರಾಮ ವಾಸ್ತವ್ಯದ ಸ್ವರೂಪ
ಈ ಬಾರಿಯ ಗ್ರಾಮವಾಸ್ತವ್ಯ ಕಳೆದ ಸಾಲಿನ ಗ್ರಾಮ ವಾಸ್ತವ್ಯಕ್ಕಿಂತ ಭಿನ್ನವಾಗಿ ಆಯೋಜನೆಗೊಳ್ಳಲಿದ್ದು, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಿ ಶಾಲೆಯಲ್ಲಿ ತಂಗಲಿದ್ದಾರೆ.

ರೈತರು ಕಾರ್ಯಕ್ರಮದ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿರಿಸಿ ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಉತ್ತಮ ಅಂಶಗಳನ್ನು ರೈತರಿಗೆ ಹೇಳುವ ಮತ್ತು ಆಧುನಿಕ ಕೃಷಿ ಪದ್ಧತಿಗೆ ಪೂರಕ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತ ಮಾಹಿತಿಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದ ಆದ್ಯತೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
 
ಮುಖ್ಯಮಂತ್ರಿಗಳು ಭೇಟಿ ನೀಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳು, ಬೇಡಿಕೆ ಹಾಗೂ ನೆರವು ನೀಡಲು ಪೂರಕ ಸಮಗ್ರ ವರದಿಯನ್ನು ತಯಾರಿಸುವರು. ಸಿಎಂ ಗ್ರಾಮ ವಾಸ್ತವ್ಯದ ವೇಳೆ ಸ್ಥಳದಲ್ಲೇ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀತಿ ನಿರೂಪಣೆಗೂ ಇದು ಸಹಕಾರಿಯಾಗಲಿದೆ ಎನ್ನುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಂಬಿಕೆಯಾಗಿದೆ.

ತಾವು ಉಳಿದುಕೊಂಡ ಗ್ರಾಮಕ್ಕೆ, ಜಿಲ್ಲೆಗೆ ಏನು ಬೇಕು? ಯಾವ ಇಲಾಖೆಯಿಂದ ಕೆಲಸ ಕಾರ್ಯಗಳು ಬಾಕಿ ಉಳಿದಿವೆ? ಎಂಬುದನ್ನು ಮನಗಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆನ್ನುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಲಾಷೆಯಾಗಿದೆ.

Trending News