ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಂಸದರು ಹಾಗೂ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ನಿಯೋಗವು ಇಂದು ಬೆಳಿಗ್ಗೆ 11:30 ಕ್ಕೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಮನವಿ ಸಲ್ಲಿಸಲಿದೆ.
ನಿಯೋಗದಲ್ಲಿ ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಹೆಚ್.ಡಿ.ದೇವೇಗೌಡ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಳೊಂದಿಗೆ ತೆರಳಿ ಪ್ರಧಾನಿಯವರಿಗೆ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯ ಕುರಿತು ಮನವರಿಕೆ ಮಾಡಿಕೊಡಲಿದೆ.