ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಇಂದು ದೆಹಲಿಯಲ್ಲಿ ಕಾವೇರಿ ಕಣಿವೆ ರಾಜ್ಯಗಳ ಸಭೆ ಕರೆದಿದೆ.
ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಉಪೇಂದ್ರ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾವೇರಿ ಕಣಿವೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಡೆಯಲಿರುವ ಇಂದಿನ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಜಾರಿ, ನೀರು ಹಂಚಿಕೆಗೆ ಸ್ಕೀಂ ರಚನೆ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಕಾವೇರಿ ನೀರಿನ ವಿವಾದದ ಬಗ್ಗೆ ಐತಿಹಾಸಿಕ ತೀರ್ಪನ್ನು ಫೆ.16ರಂದು ಪ್ರಕಟಿಸಿದ ಸುಪ್ರೀಂಕೋರ್ಟ್ 'ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ಒಂದು ರಾಜ್ಯಕ್ಕೂ ನದಿಗಳ ಬಗ್ಗೆ ಸಂಪೂರ್ಣ ಹಕ್ಕು ಇರುವುದಿಲ್ಲ' ಎಂಬುದನ್ನು ಸ್ಪಷ್ಟಪಡಿಸಿ, ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಿ ರಾಜ್ಯಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಉಪಯೋಗಿಸಲು ಆದೇಶ ನೀಡಿತ್ತು.