ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಿ: ಕಾವೇರಿ ಪ್ರಾಧಿಕಾರ ಆದೇಶ

ಸದ್ಯ, ಕೆಆರ್‌ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ 14 ಟಿಎಂಸಿ ನೀರು ಮಾತ್ರ ಬಳಕೆ ಯೋಗ್ಯವಾಗಿದೆ.  

Last Updated : May 28, 2019, 04:45 PM IST
ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಿ: ಕಾವೇರಿ ಪ್ರಾಧಿಕಾರ ಆದೇಶ title=
File Image

ನವದೆಹಲಿ: ಮುಂಗಾರು ಮಳೆ ಉತ್ತಮವಾಗಿದ್ದು ರಾಜ್ಯದ ಜಲಾಶಯಗಳಿಗೆ ಒಳಹರಿವು ಬಂದರೆ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಕರ್ನಾಟಕಕ್ಕೆ ಆದೇಶ ನೀಡಿದೆ.

ನವದೆಹಲಿಯಲ್ಲಿಂದು ಜಲಮಂಡಳಿ ಕಚೇರಿಯಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ , ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಈ ಸೂಚನೆ ನೀಡಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಅವೈಜ್ಞಾನಿಕ ಎಂದು ಕರ್ನಾಟಕದ ಪ್ರತಿನಿಧಿಗಳು ವಾದಿಸಿದ್ದಾರೆ. ಜೂನ್‌ ಅಂತ್ಯದೊಳಗೆ ಕರ್ನಾಟಕದಿಂದ ಹರಿಸಬೇಕಿರುವ ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಿಸುವಂತೆ ತಮಿಳುನಾಡಿನ ಪ್ರತಿನಿಧಿಗಳು ತಮ್ಮ ವಾದ ಮಂಡಿಸಿದರು. 

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಜೂನ್ ತಿಂಗಳಿನಲ್ಲಿ ಕರ್ನಾಟಕದ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ  ನೀರು ಹರಿಸಬೇಕು. ಆದರೆ ಮುಂಗಾರು ಮಳೆ ಉತ್ತಮವಾಗಿದ್ದು ಒಳ ಹರಿವು ಬಂದರೆ ಮಾತ್ರ ಕರ್ನಾಟಕ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ ಎಂದು ಹುಸೇನ್ ಸಭೆ ಬಳಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ.

Trending News