ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಗುರುತರ ಜವಾಬ್ದಾರಿ ಈಗ ಕಾಂಗ್ರೆಸ್ ಪಕ್ಷದ ಮೇಲಿದೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡಿರುವ ಕಾಂಗ್ರೇಸ್ ಹೈಕಮಾಂಡ್ ಈಗ ಮತ್ತೆ ರಾಷ್ಟ್ರೀಯ ಮಟ್ಟದದಲ್ಲಿ ಯುವಕರ ಸಂಘಟಿಸುವ ಜವಾಬ್ದಾರಿಯನ್ನು ಮೂಲತಃ ಕರ್ನಾಟಕದ ಭದ್ರಾವತಿಯವರಾದ ಆದ ಬಿ.ವಿ.ಶ್ರೀನಿವಾಸ್ ರವರಿಗೆ ನೀಡಿದೆ.
ಈ ಹಿಂದೆ ಶ್ರೀನಿವಾಸರವರು ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗುಜರಾತ್, ಉತ್ತರಪ್ರದೇಶ, ತೆಲಂಗಾಣಗಳ ಉಸ್ತುವಾರಿಯನ್ನು ವಹಿಸಿದ್ದರು. ಇತ್ತೀಚಿಗೆ ನಡೆದ ಗುಜರಾತ್ ಚುನಾವಣೆಯಲ್ಲಿಯೂ ಸಹಿತ ಚುನಾವಣಾ ಉಸ್ತುವಾರಿ ವಹಿಸಿಕೊಂಡು ರಾಹುಲ್ ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಮಿಗಳ ದಿನಾಚರಣೆ ದಿನದಂದು ಅಡ್ಡಿಪಡಿಸಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕರವರಿಗೆ ಮಸಿ ಬಳಿದು ಶ್ರೀನಿವಾಸ್ ಸಂಘಟನಾತ್ಮಕವಾಗಿ ಮುನ್ನಲೆಗೆ ಬಂದಿದ್ದರು. ಈಗ ಇವರ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಗುರುತಿಸಿರುವ ಕಾಂಗ್ರೇಸ್ ಹೈಕಮಾಂಡ್, ಆ ಮೂಲಕ ಸತತ ಎರಡನೇ ಬಾರಿಗೆ ರಾಹುಲ್ ಗಾಂಧಿಯವರ ನಿರ್ದೇಶನದ ಮೇರೆಗೆ ಶ್ರೀನಿವಾಸರವರನ್ನು ಆಲ್ ಇಂಡಿಯಾ ಯೂತ್ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬಿ.ವಿ.ಶ್ರೀನಿವಾಸ್ ರವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯೂತ್ ಕಾಂಗ್ರೆಸ್ ನ ಕೋಟಾದಡಿಯಲ್ಲಿ ಬೆಂಗಳೂರಿನ ಪ್ರತಿಷ್ಟಿತ ರಾಜಾಜಿನಗರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಕೂಡಾ ಆಗಿದ್ದಾರೆ ಎಂದು ತಿಳಿದುಬಂದಿದೆ.