ಬೆಂಗಳೂರು : ಇಲ್ಲಿನ ಸರ್ಜಾಪುರದ ಕಸವನಹಳ್ಳಿ ಬಳಿ ಘಟನೆ ನಿರ್ಮಾಣ ಹಂತದ 4 ಮಹಡಿ ಕಟ್ಟಡ ಕುಸಿದು ಮೂವರು ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ವಾಣಿಜ್ಯ ಬಳಕೆಗಾಗಿ ನವೀಕರಣ ಮಾಡಲು ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಕುಸಿದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸಾವಿಗೀಡಾಡವರ ಸಂಖ್ಯೆ 3ಕ್ಕೆ ಏರಿದ್ದು, 7 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಹಲವು ಕಾರ್ಮಿಕರ ಜೀವನ್ಮರಣದ ಹೋರಾಟ ನಡೆಸುತ್ತಿದ್ದು, ಅಗ್ನಿಶಾಮಕ ದಳ ಅವರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಮಾಲಿಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಧಿಕಾರಿಗಳಿಗೆ ದಾಖಲಾತಿಗಳನ್ನು ತರುವಂತೆ ಹೇಳಲಾಗಿದೆ. ಈ ಘಟನೆಯಲ್ಲಿ ಮೂರು ಕಾರ್ಮಿಕರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಅವರನ್ನು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೇಯರ್ ತಿಳಿಸಿದರು.
ಇನ್ನು, ಮೃತ ಕಾರ್ಮಿಕರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಮೇಯರ್ ಸಾಂತ್ವನ ಹೇಳಿದ್ದಾರೆ.