ಬೆಂಗಳೂರು: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯು ಚುನಾವಣಾ ಆಯೋಗವನ್ನೇ ದುರುಪಯೋಗಪದಿಸಿಕೊಂಡಿದೆ ಎಂದು ಮಾಜಿ ಸಿಎಂ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯವರು ಇವಿಎಂ ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿರುವ ಸಾಧ್ಯತೆಗಳೂ ಇರಬಹುದು. ಅಭಿವೃದ್ಧಿ ಕಾರ್ಯಗಳನ್ನೇ ಮಾಡದಿದ್ದರೂ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ? ಅಧಿಕಾರ ಹಿಡಿಯಲು ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆಂದು ಹೋದಾಗ ಅಲ್ಲಿನ ಸರ್ಕಾರ ಐದು ವರ್ಷ ಏನು ಅಭಿವೃದ್ಧಿ ಮಾಡಿದೆ ಎಂಬ ಬಗ್ಗೆ ಅನುಮಾನ ಮೂಡಿತು. ಹೈದರಾಬಾದ್- ಪೂನಾ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಪರದಾಡಬೇಕಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ತವರು ರಾಜ್ಯದ ಸ್ಥಿತಿಯೇ ಹೀಗೆ. ಆದರೂ ಜನ ಬಿಜೆಪಿಗೆ ಮತ ನೀಡುತ್ತಾರೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಚುನಾವಣೆ ಘೋಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಬೇಕು. ಆದರೆ ರಾಜ್ಯದಲ್ಲಿ 70 ದಿನ ಮುಂಚಿತವಾಗಿ ಚುನಾವಣೆಯ ದಿನವನ್ನು ಘೋಷಿಸಿದರೂ ಇನ್ನೂ ನೀತಿಸಂಹಿತೆ ಜಾರಿಯಾಗಿಲ್ಲ. ಇವೆಲ್ಲ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಇವಿಎಂ ಯಂತ್ರಗಳು ನಂಬಿಕಾರ್ಹವಲ್ಲ ಎಂಬ ಕಾರಣದಿಂದ ಅಮೆರಿಕಾ, ಜಪಾನ್, ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳೇ ಸಾಂಪ್ರದಾಯಿಕ ಮತದಾನದ ಶೈಲಿಯಾದ ಮತಚೀಟಿ ಬಳಕೆಯನ್ನು ಮರು ಅಳವಡಿಕೆ ಮಾಡಿಕೊಂಡಿರುವಾಗ ಭಾರತ ಏಕೆ ಮಾಡಿಕೊಳ್ಳಬಾರದು? ಇಷ್ಟೊಂದು ಜನ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದರೂ ಅದರ ಮೇಲೆ ಬಿಜೆಪಿಗರ ಅತಿಯಾದ ಪ್ರೀತಿಗೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ನೆರೆ ಪರಿಹಾರದ ಬಗ್ಗೆಯೂ ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರು, ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷವಾಗಿ ನಾವು ನಿತ್ಯವೂ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಇದು ಭಂಡಗೆಟ್ಟ ಸರ್ಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ. ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು, ನಿದ್ರಿಸುತ್ತಿರುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯದ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.