Bidar Lok Sabha Constituency: ಬಿಜೆಪಿಯ ಭಿನ್ನಮತ, ಗ್ಯಾರಂಟಿ ಯೋಜನೆಗಳ ಲಾಭ ಖಂಡ್ರೆಗೆ ವರ..?

Bidar Lok Sabha Constituency: 1952ರಿಂದ 2019ರವರೆಗಿನ ಬೀದರ್ ಲೋಕಸಭೆ ಕ್ಷೇತ್ರ ಹಲವು ನಾಯಕರನ್ನ ಪರಿಚಯಿಸಿದೆ. ಬೀದರ್ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಕಲಬುರರ್ಗಿ ಜಿಲ್ಲೆಯ ಎರಡು ಕ್ಷೇತ್ರಗಳು ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಸದ್ಯಕ್ಕೆ ಕ್ಷೇತ್ರದಲ್ಲಿ ರಾಜಕೀಯ ಬಲಾಬಲ ನೋಡಬೇಕಾದ್ರೆ ಬಿಜೆಪಿಯ ಐವರು ಶಾಸಕರು, ಮೂವರು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

Written by - Manjunath N | Last Updated : Apr 10, 2024, 12:13 AM IST
  • ಸದ್ಯಕ್ಕೆ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ ಕಂಡು ಬರ್ತಿದೆ.
  • ಚುನಾವಣೆ ಹಾಗೆ ಕಾಣ್ತಿಲ್ಲ. ಜೋ ದಿಖತಾ ಹೈ ಓ ಹೋತಾ ನಹಿ, ಜೋ ಹೋತಾ ಹೈ ಓ ದಿಖತಾ ನಹಿ ಅನ್ನೋ ಹಾಗಾಗಿದೆ.
  • ಸದ್ಯಕ್ಕೆ ಕಣ್ಣಿನ ಮುಂದೆ ಕಾಣ್ತಿರುವ ಹಾಗೆ ಚುನಾವಣೆ ಇಲ್ಲ. .
 Bidar Lok Sabha Constituency: ಬಿಜೆಪಿಯ ಭಿನ್ನಮತ, ಗ್ಯಾರಂಟಿ ಯೋಜನೆಗಳ ಲಾಭ ಖಂಡ್ರೆಗೆ ವರ..? title=

ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ್ತಷ್ಟು ಕಾವೇರಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಂದ ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಯು ಮತದಾರನ ಮಹತ್ತರವಾದ ವಿವೇಚನೆ. ಸರಳ, ಸಂಯಮ, ಸಮರ್ಥ ಮತ್ತು ಸ್ಪಂದನೆವುಳ್ಳ ಸಂಸದರನ್ನ ಆರಿಸಿ ಕಳಿಸಬೇಕಾಗಿರೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕುರಿತು ಜೀ ಕನ್ನಡ ನ್ಯೂಸ್‌ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ನಿಮ್ಮ ನಿಮ್ಮ ಸಂಸತ್‌ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ, ಜನರ ನೋವುಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಹೇಗಿದೆ..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಸಂತರು, ಶರಣರು, ದಾಸರು ನಡೆದಾಡಿದ ನೆಲವಿದು. ಬಹುಮನಿ ಸುಲ್ತಾನರು, ನಿಜಾಮರು ಆಳಿದ ಐತಿಹಾಸಿಕ ಹಿನ್ನಲೆಯುಳ್ಳ ವಚನ ಸಾಹಿತ್ಯದ ತವರೂರು. ಕರ್ನಾಟಕದ ಕಿರೀಟ ಎಂತಲೇ ಖ್ಯಾತಿಯಾಗಿರುವ ಜಿಲ್ಲೆ ಬೀದರ್. ಬೀದರ್ ಜಿಲ್ಲೆಯಲ್ಲಿ 1952 ರಿಂದ 2019 ರ ವರೆಗಿನ ಲೋಕಸಭೆ ಚುನಾವಣೆ ಇತಿಹಾಸ ಗಮನಿಸಿದಾಗ ಪ್ರತಿ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ. ಇದೀಗ ಮತ್ತೆ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗ್ತಿದ್ದಂಗೆ ಚುನಾವಣೆಯ ಕಾವು ಕೂಡ ಜೋರಾಗಿದೆ. ಮತ್ತೊಮ್ಮೆ ಮೋದಿ ಎಂದು ಕೆಸರಿ ಪಡೆ ಘರ್ಜಿಸುತ್ತಿದ್ದರೆ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರಲು ಕಾಂಗ್ರೆಸ್ ಕೂಡ ತಯಾರಿ ಮಾಡಿಕೊಂಡಿದೆ.

1952ರಿಂದ 2019ರವರೆಗಿನ ಬೀದರ್ ಲೋಕಸಭೆ ಕ್ಷೇತ್ರ ಹಲವು ನಾಯಕರನ್ನ ಪರಿಚಯಿಸಿದೆ. ಬೀದರ್ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಕಲಬುರರ್ಗಿ ಜಿಲ್ಲೆಯ ಎರಡು ಕ್ಷೇತ್ರಗಳು ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಸದ್ಯಕ್ಕೆ ಕ್ಷೇತ್ರದಲ್ಲಿ ರಾಜಕೀಯ ಬಲಾಬಲ ನೋಡಬೇಕಾದ್ರೆ ಬಿಜೆಪಿಯ ಐವರು ಶಾಸಕರು, ಮೂವರು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 17 ಲಕ್ಷದ 75 ಸಾವಿರದ 95 ಜನ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಸದ್ಯಕ್ಕೆ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ವಿಧಾಸಭೆ ಕ್ಷೇತ್ರವಾರು ನೋಡುವುದಾದರೆ.

ಬೀದರ್‌ ಕ್ಷೇತ್ರ ಪರಿಚಯ 
2023ರ ಅಸೆಂಬ್ಲಿ ಚುನಾವಣೆ  
1. ಚಿಂಚೋಳಿ(ಮಿಸಲು): ಅವಿನಾಶ ಜಾಧವ್-ಬಿಜೆಪಿ
   (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಕೇವಲ 858 ಮತಗಳ ಗೆಲುವು)
2. ಆಳಂದ : ಬಿ.ಆರ್ ಪಾಟೀಲ್ -ಕಾಂಗ್ರೆಸ್
   (ಬಿಜೆಪಿ ಅಭ್ಯರ್ಥಿ ವಿರುದ್ಧ 10,348 ಮತಗಳ ಗೆಲುವು) 
3. ಬಸವಕಲ್ಯಾಣ : ಶರಣು ಸಲಗರ  -ಬಿಜೆಪಿ 
   (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 14,415 ಮತಗಳ ಗೆಲುವು)
4. ಹುಮನಾಬಾದ್ : ಡಾ.ಸಿದ್ದು ಪಾಟೀಲ್-ಬಿಜೆಪಿ
   (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 1,594 ಮತಗಳ ವಿಜಯ)
5. ಬೀದರ್ ದಕ್ಷಿಣ : ಡಾ.ಶೈಲೇಂದ್ರ ಬೇಲ್ದಾಳೆ-ಬಿಜೆಪಿ
   (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಕೇವಲ 1,263 ಮತಗಳ ವಿಜಯ)
6. ಬೀದರ್ ಉತ್ತರ : ರಹೀಂಖಾನ್  -ಕಾಂಗ್ರೆಸ್
   (ಜೆಡಿಎಸ್‌ ಅಭ್ಯರ್ಥಿ ವಿರುದ್ಧ 10,780 ಮತಗಳ ವಿಜಯ)  
7) ಭಾಲ್ಕಿ : ಈಶ್ವರ ಖಂಡ್ರೆ -ಕಾಂಗ್ರೆಸ್
   (ಬಿಜೆಪಿ ಅಭ್ಯರ್ಥಿ ವಿರುದ್ಧ 27,760 ಮತಗಳ ವಿಜಯ) 
8. ಔರಾದ್(ಮಿಸಲು):ಪ್ರಭು ಚವ್ಹಾಣ -ಬಿಜೆಪಿ
   (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 9,569 ಮತಗಳ ವಿಜಯ)

1952ರಿಂದ 2019ರವರೆಗೆ ಗೆದ್ದವರು

* 1952ರಿಂದ 1989ರವರೆಗೆ ಕಾಂಗ್ರೆಸ್‌ ಕಮಾಲ್‌
* 1991ರಿಂದ 2019ರವರೆಗೆ ಬಿಜೆಪಿಯೇ ಮೇಲುಗೈ
* 1991-2004ರವರೆಗೆ ರಾಮಚಂದ್ರ ವೀರಪ್ಪ-ಬಿಜೆಪಿ
* 2004ರಲ್ಲಿ ನರಸಿಂಗರಾವ ಸೂರ್ಯವಂಶಿ-ಕಾಂಗ್ರೆಸ್
* 2009ರಲ್ಲಿ ಎನ್. ಧರಂಸಿಗ್- ಕಾಂಗ್ರೆಸ್
* 2014- ಭಗವಂತ ಖೂಬಾ-ಬಿಜೆಪಿ
* 2019- ಭಗವಂತ ಖೂಬಾ-ಬಿಜೆಪಿ

2014ರಿಂದ ದೇಶದಲ್ಲಿ ಮೋದಿ ಮೇನಿಯಾ ವರ್ಕ ಆಗಿದೆ ಅಂತಾರೆ. ಅದರಂತೆ ಬೀದರ್ ಕ್ಷೇತ್ರದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ಭಗವಂತ ಖೂಬಾ ಅವರನ್ನು ಕ್ಷೇತ್ರದ ಮತದಾರರು ಎರಡು ಬಾರಿ ಸಂಸತ್‌ಗೆ ಆಯ್ಕೆ ಮಾಡಿದ್ದಾರೆ. ಭಗವಂತ ಖೂಬಾ ಅವರು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಸ್ವಪಕ್ಷೀಯ ಶಾಸಕರ ತೀವ್ರ ವಿರೋಧದ ನಡುವೆಯೂ ಇದೀಗ ಬಿಜೆಪಿ ಹೈಕಮಾಂಡ್‌ ಮತ್ತೆ ಭಗವಂತ ಖೂಬಾ ಅವರನ್ನು ಆಖಾಡಕ್ಕಿಳಿಸಿದೆ.

ನಿರ್ಣಾಯಕ ಸಾಮಾಜಿಕ ಅಂಶಗಳು 

ಮತದಾರರಿಗೆ ಕನೆಕ್ಟ್‌ ವಿಷಯಗಳು  
* ನಾಲ್ಕು ದಶಕಗಳಿಂದ ಕಾರಂಜ ಜಲಾಶಯ ಸಂತ್ರಸ್ತರಿಗೆ ಸಿಗದ ಪರಿಹಾರ
* ರೈತರ ಭೂಮಿಗೆ ನೀರು ಹರಿಯದೆ ಕಾಮಗಾರಿಯಲ್ಲಿ ಭ್ರಷ್ಟಾಚಾರ
* ಜಮಿನು ಕಳೆದುಕೊಂಡ ರೈತರಿಗೆ ಚುನಾವಣೆ ವೇಳೆ ಘೋಷಣೆ ಮತ್ತು ಭರವಸೆ
* ಗಡಿ ಭಾಗದ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಕರು ಪರದಾಟ
* ಸರ್ಕಾರಿ ನೌಕರಿ ಸಿಗದೆ ಲಕ್ಷಾಂತರ ಯುವಕರ ಪರದಾಟ, ನಿರುದ್ಯೋಗ
* ಬೀದರ್-ನಾಂದೇಡ ಹೊಸ ರೈಲ್ವೆ ಮಾರ್ಗದ ಘೋಷಣೆಗೆ ಸೀಮಿತವಾಗಿದೆ
* ಬೀದರ್ ಕೈಗಾರಿಕಾ ಪ್ರದೇಶಕ್ಕೆ ಮರುಜೀವ ನೀಡುವಲ್ಲಿ ಮೀನಾಮೇಷ 
* 1982ರಲ್ಲಿ ಸ್ಥಾಪಿತ ಕೈಗಾರಿಕಾ ವಲಯ ಮೂಲ ಸೌಲಭ್ಯಗಳಿಲ್ಲದೆ ಹೈದ್ರಾಬಾದ್‌ಗೆ ಶಿಫ್ಟ್‌
* ಬೀದರ್ ನಾಗರೀಕ ವಿಮಾನಯಾನ ಕೆಲದಿನ ಆರಂಭವಾಗಿ ಈಗ ಮತ್ತೆ ರದ್ದಾಗಿರುವುದು

ಹಾಗಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಎಷ್ಟೆಷ್ಟು ಮತಗಳನ್ನ ಪಡೆದರು ಅಂತ ನೋಡೋದಾದ್ರೆ.. ಯಾಕಂದ್ರೆ ಕಳೆದ ಬಾರಿ ಅಪ್ಪನ ವಿರುದ್ಧ ಖೂಬಾ ಸೆಣಸಾಡಿದ್ದರೆ ಇವಾಗ ಪುತ್ರ ಸಾಗರ್‌ ವಿರುದ್ಧ ಪೈಪೋಟಿ ನಡೆಸುತ್ತಿದ್ದಾರೆ.

2019ರ ಲೋಕಸಭೆ ಚುನಾವಣೆಯ ಫಲಿತಾಂಶ 

ಕ್ಷೇತ್ರ               ಈಶ್ವರ್‌ ಖಂಡ್ರೆ        ಭಗವಂತ ಖೂಬಾ   ಒಟ್ಟು ಮತ
ಚಿಂಚೋಳಿ         47248                60838               116174
ಆಳಂದ             48738                77025               133610
ಬಸವಕಲ್ಯಾಣ     50067                 88805               146623
ಹುಮನಾಬಾದ್   63381                 76900               151494
ಬೀದರ್ ದಕ್ಷಿಣ    68182                 57064               132317
ಬೀದರ್ ಉತ್ತರ  72506                  60910               138400
ಭಾಲ್ಕಿ              67151                79414                154542
ಔರಾದ್            50024                 82877                 140992

ಚುನಾವಣಾ ಹಿನ್ನೋಟ 

2014ರ ಫಲಿತಾಂಶ 
- ಭಗವಂತ ಖೂಬಾ :ಬಿಜೆಪಿ- 459260  (47.87%)
- ಎನ್.ಧರಂಸಿಂಗ್ :ಕಾಂಗ್ರೆಸ್- 367068 (38.26%)
- ಬಂಡೆಪ್ಪ ಕಾಶೆಂಪೂರ್ :ಜೆಡಿಎಸ್- 58728 (6.12%)
- ಚಲಾವಣೆಯಾದ ಒಟ್ಟು ಮತಗಳು 9,63,206
- ಬಿಜೆಪಿ ಅಭ್ಯರ್ಥಿಗೆ 92,222 ಮತಗಳ ಅಂತರದ ಗೆಲುವು 

ಚುನಾವಣಾ ಹಿನ್ನೋಟ 

2019ರ ಫಲಿತಾಂಶ
- ಭಗವಂತ ಖೂಬಾ : ಬಿಜೆಪಿ- 585471 (52.41%)
- ಈಶ್ವರ ಖಂಡ್ರೆ : ಕಾಂಗ್ರೆಸ್- 468637  (41.95)
- ಬಾಬಾ ಬುಖಾರಿ : ಜೆಡಿಎಸ್- 15188 (1.36%)
- ಚಲಾವಣೆಯಾದ ಒಟ್ಟು ಮತಗಳು 1118255 (63%)
- ಬಿಜೆಪಿ ಅಭ್ಯರ್ಥಿಗೆ 1,16,834 ಮತಗಳ ಅಂತರದ ಜಯ

ಸದ್ಯಕ್ಕೆ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ ಕಂಡು ಬರ್ತಿದೆ. ಚುನಾವಣೆ ಹಾಗೆ ಕಾಣ್ತಿಲ್ಲ. ಜೋ ದಿಖತಾ ಹೈ ಓ ಹೋತಾ ನಹಿ, ಜೋ ಹೋತಾ ಹೈ ಓ ದಿಖತಾ ನಹಿ ಅನ್ನೋ ಹಾಗಾಗಿದೆ. ಸದ್ಯಕ್ಕೆ ಕಣ್ಣಿನ ಮುಂದೆ ಕಾಣ್ತಿರುವ ಹಾಗೆ ಚುನಾವಣೆ ಇಲ್ಲ. ಕಣ್ಣಿಗೆ ಕಾಣದ ಹಾಗೆ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಸ್ವಪಕ್ಷೀಯರ ಅಸಮಾಧಾನ, ಸೆಡ್ಡು ಹೊಡೆದು ನಿಂತ ಮರಾಠ ಸಮುದಾಯದ ಮುಖಂಡರ ನಡೆ, ಎಲ್ಲವನ್ನು ಗಮನಿಸಿದ್ರೆ ಎರಡು ಬಾರಿ ಚುನಾವಣೆಯಲ್ಲಿ ಗಿಟ್ಟಿಸಿಕೊಂಡ ಗೆಲುವಿನಂತೆ ಈ ಚುನಾವಣೆ ಅಷ್ಟು ಸುಲಭವಾಗಿ ಕಾಣ್ತಿಲ್ಲ. ಹಾಗಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ ಖಂಡ್ರೆಗೆ ಅನುಕೂಲ ಅಂತಲೂ ಸರಾಗವಾಗಿ ಹೇಳೋದಿಕೂ ಆಗಲ್ಲ. ರಾಜಕೀಯ ಅನುಭವದ ಕೊರತೆ, ಎಲ್ಲದಕ್ಕೂ ತಂದೆ ಈಶ್ವರ ಖಂಡ್ರೆ, ಅಜ್ಜ ಭೀಮಣ್ಣ ಖಂಡ್ರೆ ಅವರ ರಾಜಕೀಯ ಅಸ್ತಿತ್ವವೆ ಇವರಿಗೆ ಶ್ರೀರಕ್ಷೆಯಾಗಲಿದೆ. ಕಾಂಗ್ರೆಸ್ ಪಾಳಯದಲ್ಲಿ ಸುಲಭವಾಗಿ ಚುನಾವಣೆಯ ಲಾಭ ಸಿಗುತ್ತೆ ಅನ್ನೋ ವಿಶ್ವಾಸವೂ ಇಲ್ಲ. ಹಾಗಿದ್ರೆ ಬಿದರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಯಾದ್ರು ಎನು ನೋಡೋಣ ಬನ್ನಿ

ಬಿಜೆಪಿಯಲ್ಲಿನ ಭಿನ್ನಮತ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವ ಮೂಲಕ ಸಂಸತ ಪ್ರವೇಶ ಮಾಡಲು ಕೈ ಪಕ್ಷದ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಅದರಂತೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕೂಡ ಕಾಲಿಗೆ ಚಕ್ರ ಸುತ್ತಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಭರಾಟೆಯಿಂದ ನಡೆಸುತ್ತಿದ್ದಾರೆ. ಔರಾದ್ ಮಿಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರಭು ಚವ್ಹಾಣ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅಲ್ಲಿ ಮತ ಬೇಟೆ ಮಾಡೋದು ಅಷ್ಟು ಸುಲಭವಾಗಿಲ್ಲ. ಆದ್ರು ಮೋದಿ ಜನಪ್ರಿಯತೆಯನ್ನು ತಡೆಯುವ ಶಕ್ತಿ ಆ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂಬ ಚರ್ಚೆ ಕೂಡ ಜೋರಾಗಿದೆ. ಅಸಲಿಗೆ ಲಿಂಗಾಯತ, ದಲಿತ ಮತ್ತು ಮರಾಠಿಗ ಮತಗಳೇ ಇಲ್ಲಿ ನಿರ್ಣಾಯಕ ಅಂತ ಹೇಳಲಾಗ್ತಿದೆ..

ಜಾತಿವಾರು ಲೆಕ್ಕಾಚಾರ
ಲಿಂಗಾಯತ : 4.20 ಲಕ್ಷ
ದಲಿತರು : 6 ಲಕ್ಷ
ಲಂಬಾಣಿ : 1.50 ಲಕ್ಷ
ಕುರುಬರು : 1.50 ಲಕ್ಷ
ಮರಾಠರು : 2.60 ಲಕ್
ಇತರೆ : 2.50 ಲಕ್ಷ 

ಅಂದ್‌ ಹಾಗೆ ಬಿಜೆಪಿ ಟಿಕೆಟ್ ನಿಡುವಲ್ಲಿ ಮೋಸ ಮಾಡಿದೆ. 2014ರಿಂದ ಮರಾಠ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು. ಆಕಾಂಕ್ಷಿಗಳ ಪಟ್ಟಿಯಲ್ಲಿ ನಂದುಕುಮಾರ ಸಾಳುಂಕೆ, ಪದ್ಮಾಕರ ಪಾಟೀಲ್ ಸೇರಿ ಅನೇಕರಿದ್ದರು. ಯಾರನ್ನು ಪರಿಗಣಿಸದೆ ಸ್ವಪಕ್ಷೀಯ ಶಾಸಕರು, ಮುಖಂಡರ ತೀವ್ರ ವಿರೋಧವಿದ್ದರು ಹಾಲಿ ಸಂಸದ ಭಗವಂತ ಖೂಬಾ ಅವರನ್ನೆ ಟಿಕೆಟ್ ನೀಡಿದಕ್ಕೆ ಮುನಿಸಿಕೊಂಡ ಮರಾಠ ಸಮುದಾಯದ ಬಿಜೆಪಿ ಮುಖಂಡರು ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಈ ಚುನಾವಣೆಯಲ್ಲಿ ಮಹಾರಾಷ್ಟ್ರದ ಮರಾಠ ಮಿಸಲಾತಿ ಹೋರಾಟದ ಮುಖ್ಯಸ್ಥ ಮನೋಜ ಜರಾಂಗೆ ಪಾಟೀಲ್ ಅವರನ್ನು ಕರೆತರುವ ಮೂಲಕ ಗಡಿ ಜಿಲ್ಲೆಯಲ್ಲಿ ಮರಾಠ ಸಮುದಾಯದ ತಾಕತ್ತು ಪ್ರದರ್ಶನಕ್ಕೆ ಸಜ್ಜಾಗಿದೆ. ಅಲ್ದೆ ಚುನಾವಣೆಯಲ್ಲಿ ಪಕ್ಷೇತರ ಅಬ್ಯರ್ಥಿ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಟಾಂಗ್ ಕೊಡ್ತಿರುವ ಬೆಳವಣಿಗೆ ಕೂಡ ನಡೆಯುತ್ತಿದೆ.

ಒಟ್ಟಿನಲ್ಲಿ ಅಳೆದು ತೂಗಿ ಗುಣಾಕಾರ ಭಾಗಾಕಾರ ಲೆಕ್ಕಾಚಾರ ಎಷ್ಟೇ ಆದ್ರೂ ಸದ್ಯಕ್ಕಂತೂ ಮತದಾರನ ಮತದ ಮನದಾಳು ಸುಲಭವಾಗಿ ಸಿಗ್ತಿಲ್ಲ. ಜಾತಿವಾರು, ಪಕ್ಷವಾರು, ಎಲ್ಲಾ ಆಯಾಮದಲ್ಲೂ ನೋಡಿದ್ರೆ ಬೀದರ್ ಕ್ಷೇತ್ರದಲ್ಲಿ ಏನಾಗುತ್ತೋ ಎನಿಲ್ಲವೋ.. ಹೇಳಲಿಕೆ ಆಗಲ್ಲ. ಏನಿದ್ರು ಮತ ಪೆಟ್ಟಿಗೆ ಒಡೆದು ಫಲಿತಾಂಶ ಹೊರ ಬಿದ್ದಾಗ ಮಾತ್ರ ಯಾರು ಪ್ರಭಾವಿಗಳು ಎಂಬುದು ಗೊತ್ತಾಗಲಿದೆ.. ಅಲ್ಲಿವರೆಗೆ ಕಾಯಲೇಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News